ರಾಷ್ಟ್ರೀಯ ಶಿಕ್ಷಣ ನೀತಿ ಬಂಡವಾಳ ಶಾಹಿಗಳ ಮಾರ್ಕೆಟ್: ಚಿಂತಕ ಶಿವಸುಂದರ್

ಮೈಸೂರು,ಸೆ.13: ರಾಷ್ಟ್ರೀಯ ಶಿಕ್ಷಣ ನೀತಿ ಪದ್ದತಿ ಬಂಡವಾಳ ಶಾಹಿಗಳ ಒಂದು ಮಾರ್ಕೆಟ್ ಆಗಿದೆ ಎಂದು ಖ್ಯಾತ ಚಿಂತಕ ಹಾಗೂ ಬರಹಗಾರ ಶಿವಸುಂದರ್ ಅಭಿಪ್ರಾಯಿಸಿದರು.
ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ರವಿವಾರ ಗಾಂಧಿ ವಿಚಾರ ಪರಿಷತ್ ಮೈಸೂರು ಆಯೋಜಿಸಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ” ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ- ನವ ಉದಾರವಾದ ಕುರಿತು ವಿಚಾರ ಮಂಡನೆ ಮಾಡಿದರು.
ಸ್ವಾತಂತ್ರ್ಯ ನಂತರ ಸರ್ಕಾರ ಶಿಕ್ಷಣ, ಆರೋಗ್ಯ, ಮೂಲಭೂತ ವ್ಯವಸ್ಥೆ ಕೊಡಬೇಕು ಎಂದುಕೊಂಡಿತ್ತು. ಅದನ್ನು ನವ ಉದಾರವಾದ ಹಿಂದೆ ಸರಿಯುವಂತೆ ಮಾಡಿತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಭುತ್ವವೇ ಮುಂದೆ ನಿಂತು ಎಲ್ಲಾ ಕ್ಷೇತ್ರಗಳ ನೀತಿಗಳನ್ನು ಮಾರುಕಟ್ಟೆಗೆ ಪೂರಕವಾಗಿ ಪುನರ್ ನಿರ್ಮಾಣ ಮಡಿದೆ. ಪ್ರಭುತ್ವವೇ ಮಾರುಕಟ್ಟೆಗೆ ಸಜ್ಜುಗೊಳಿಸುವುದು ಇದರ ಉದ್ದೇಶವಾಗಿದೆ. ಹಾಗಾಗಿಯೇ 2020ರ ಶಿಕ್ಷಣ ನೀತಿ ಜಾರಿಗೆ ಬಂದಿದೆ ಎಂದು ಹೇಳಿದರು.
ಇಂದಿರಾಗಾಂಧಿ ಎರಡನೇ ಬಾರಿ ಪುನರಾಗಮನ, ನರೇಂದ್ರ ಮೋದಿ ಸೆಕೆಂಡ್ ಕಮಿಂಗ್ ಎರಡೂ ದೇಶದ ದೊಡ್ಡ ದುರಂತ. ಸೆಕೆಂಡ್ ಕಮಿಂಗ್ ಜೊತೆಗೆ ದೇಶದಲ್ಲಿ ಮಾರುಕಟ್ಟೆ ಪರವಾದ ಆರ್ಥಿಕ ನೀತಿ ಮತ್ತು ಬಹುಸಂಖ್ಯಾತರ ಧರ್ಮದ ಪರವಾದ ಸಾಮಾಜಿಕ ನೀತಿ ದೊಡ್ಡ ಮಟ್ಟದಲ್ಲಿ ಪ್ರಾರಂಭವಾಯಿತು. ಅದರ ಭಾಗವಾಗಿ ಶಿಕ್ಷಣ ನೀತಿಯೂ ಹುಟ್ಟುಕೊಂಡಿತು. ಶಿಕ್ಷಣ ನೀತಿಯನ್ನು ತನ್ನಷ್ಟಕ್ಕೆ ತಾನೆ ಸ್ವತಂತ್ರ ರೀತಿಯಲ್ಲಿ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಯಾವುದೇ ಶಿಕ್ಷಣ ನೀತಿ ಅಸ್ಥಿತ್ವದಲ್ಲಿರುವ ಆಳುವ ಜನ ಹೇಗೆ ಸಮಾಜವನ್ನು ಕಟ್ಟಬೇಕು ಎಂದು ಕೊಂಡಿರುತ್ತಾರೊ ಅದಕ್ಕೆ ಪೂರಕವಾಗಿ ಶಿಕ್ಷಣ ನೀತಿ ಇರುತ್ತದೆ ಎಂದರು.
ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಹೇಳುವ ಸರ್ಕಾರ ಗುಣಮಟ್ಟದ ಶಿಕ್ಷಣ ನೀಡುವ ಹೆಸರಿನಲ್ಲಿ ಹಳ್ಳಿಗಳಲ್ಲಿ ಇರುವ ಶಾಲೆಗಳನ್ನು ಮುಚ್ಚಿ ಒಂದು ಕ್ಲಸ್ಟರ್ ಮಾಡಿ ಶಿಕ್ಷಣ ನೀಡುವುದಾಗಿ ಹೇಳುತ್ತದೆ. ಅಲ್ಲಿ ಗುಣಮಟ್ಟ ಶಿಕ್ಷಣ ನೀಡುವುದಾಗಿ ಹೇಳಿ ಹೆಚ್ಚು ವಿದ್ಯಾರ್ಥಿಗಳು ಬರುವ ಹಾಗೆ ನೋಡಿಕೊಳ್ಳುವುದು, ವಿದ್ಯಾರ್ಥಿಗಳು ಬಂದ ಹಾಗೆ ಶಾಲೆಗಳನ್ನು ಹೆಚ್ಚಿಸಬೇಕು. ಆದರೆ ಅವರು ಶಾಲೆಗಳನ್ನು ತೆರೆಯುವ ಬದಲು ಆನ್ ಲೈನ್ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಇವತ್ತಿನ ಆನ್‍ಲೈನ್ ಶಿಕ್ಷಣ, ಪರೀಕ್ಷೆ ಡಿಜಿಟಿಲೀಕರಣವಾದರೆ 1.5 ಲಕ್ಷ ಕೋಟಿ ರೂ. ವಹಿವಾಟು ನಡೆಯುತ್ತದೆ ಎಂದು ಹೇಳಿದರು.
ಆನ್ ಲೈನ್ ಶಿಕ್ಷಣ ಬೇಕು ಎಂದರೆ 5ಜಿ ನೆಟ್ ಬೇಕು. ಮೊಬೈಲ್ ಬೇಕು. ಜೊತೆಗೆ ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿ ಅಂಬಾನಿಗೆ ಮಾರ್ಕೆಟ್ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಶಿಕ್ಷಣ ನೀತಿ ಬಗ್ಗೆ ಈಗ ಪ್ರಕಟಿಸಿರುವ ಅಂಶಗಳೇ ಕೊನೆಯಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಜನ ವಿರೋಧಿ ಅಂಶಗಳನ್ನು ಸೇರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈ ನೀತಿಯಲ್ಲಿ ಸೆಕ್ಯುಲರಿಸಂ ಬಗ್ಗೆ ಎಲ್ಲೂ ಹೇಳಿಲ್ಲ ಎಂದರು.
ನಿವೃತ್ತ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಮಾತನಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಒಳ್ಳೆಯ ಆದರ್ಶಗಳು ಇದ್ದಂತೆ ಕಾಣುತ್ತಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಕಷ್ಟಸಾಧ್ಯ ಎಂದು ಹೇಳಿದರು.
ಭಾರತ ಸಂವಿಧಾನದಲ್ಲಿರುವ ಮೂಲ ಆಶಯಗಳನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ. ಕೆಲವೇ ಕೆಲವು ಅಂಶಗಳು ಹೊಸದಾಗಿ ಸೇರಿಸಲಾಗಿದೆ. ಆದರೆ ಇಂದಿನ ಶಿಕ್ಷಣದ ಮೂಲಕ ಸಮತೆ ಸೃಷ್ಟಿಸುವುದು ಸವಾಲಿನ ಕೆಲಸವಾಗಿದೆ. ಏಕೆಂದರೆ ಶಿಕ್ಷಣ ಎನ್ನುವುದು ಖಾಸಗಿ ವಲಯಕ್ಕೆ ಬಂದು ನಿಂತಿದೆ. ರಾಜ್ಯದಲ್ಲಿ 48,216 ಸರ್ಕಾರಿ ಶಾಲೆಗಳಿದ್ದು, 7261 ಅನುದಾನಿತ ಶಾಲೆಗಳಿವೆ. 9769 ಖಾಸಗಿ ಶಾಲೆಗಳಿವೆ. ಇಷ್ಟಿದ್ದರೂ, ಮಕ್ಕಳ ಕೊರತೆ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಒಂದೊಂದಾಗಿ ಮುಚ್ಚಲಾಗುತ್ತಿದೆ. ಈ ರೀತಿಯಾದರೆ ಎಲ್ಲರನ್ನು ಶಿಕ್ಷಣ ಒಳಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ-ರಾಜಕಾರಣ ವಿಷಯದ ಕುರಿತು ಮಾತನಾಡಿದ ಮೈಸೂರು ವಿವಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಮುಜಾಫರ್ ಅಸಾದಿ, ಹೊಸ ಶಿಕ್ಷಣ ನೀತಿಯನ್ನು ನಾವು ವಿರೋಧಭಾಸದಿಂದ ನೋಡಬೇಕು. ಇದರಲ್ಲಿ ಅನೇಕ ವಿಸ್ಮತಿಗಳಿವೆ. ನೆಹರೂ ಮತ್ತು ಗಾಂಧಿಯ ಶಿಕ್ಷಣ ನೀತಿಯ ಮಾದರಿಗಳನ್ನು ಹೊಸ ಶಿಕ್ಷಣ ಪದ್ಧತಿಯಲ್ಲಿ ಕೈಬಿಡಲಾಗಿದೆ. ಇದರ ಉದ್ದೇಶ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವುದು ಹಾಗೂ ಹಿಂದಿ ಭಾಷೆ ಹೇರುವುದಾಗಿದೆ ಎಂದರು.
ವಿಚಾರ ಸಂಕರಣವನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಜಿ.ಪಿ. ಬಸವರಾಜು, ಕೃಷ್ಣಪ್ರಸಾದ್, ಚಿಂತಕ ಪ್ರೊ.ಪಂಡಿತಾರಾಧ್ಯ ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ನಾವು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸುತ್ತಿದ್ದೇವಾ ಎಂದು ಪ್ರಶ್ನಿಸಿಕೊಳ್ಳ ಬೇಕಿದೆ. ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಭಾಷಣ ಮಾಡುವ ನಾವು ಮೊದಲು ನಮ್ಮ ಮಕ್ಕಳಿಗೆ ಮಾತೃಭಾಷೆ ಶಿಕ್ಷಣ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಬೇಕು. ಆ ನಿಟ್ಟಿನಲ್ಲಿ ನಾವುಗಳು ಕಾರ್ಯಪ್ರವೃತ್ತರಾಗಬೆಕು.
-ಕೃಷ್ಣಪ್ರಸಾದ್, ಹಿರಿಯ ಪತ್ರಕರ್ತರು







