ಕಾಸರಗೋಡು: ಸಚಿವ ಕೆ.ಟಿ ಜಲೀಲ್ ರಾಜೀನಾಮೆಗೆ ಒತ್ತಾಯಿಸಿ ಎಂಎಸ್ಎಫ್ ಪ್ರತಿಭಟನೆ, ಪೊಲೀಸರಿಂದ ಜಲಫಿರಂಗಿ

ಕಾಸರಗೋಡು, ಸೆ.14: ಎನ್ಫೋರ್ಸ್ ಮೆಂಟ್ ವಿಚಾರಣೆಗೆ ಒಳಗಾಗಿರುವ ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ ಜಲೀಲ್ ರಾಜೀನಾಮೆ ನೀಡುವಂತೆ ಎಂಎಸ್ಎಫ್ ವಿದ್ಯಾರ್ಥಿ ಸಂಘಟನೆ ಇಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ನಡೆಸಿದ ಜಾಥಾ ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಬಳಸಿದರು.
ವಿದ್ಯಾನಗರದಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಪ್ರವೇಶ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ದೂಡಿ ಮುನ್ನುಗ್ಗಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು.
ಈ ಸಂಧರ್ಭ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕು- ತಳ್ಳಾಟ ನಡೆಯಿತು. ಬಳಿಕ ನಡೆದ ಪ್ರತಿಭಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಎಂಎಸ್ಎಫ್ ಜಿಲ್ಲಾಧ್ಯಕ್ಷ ಇರ್ಷಾದ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು.
ಅಶ್ರಫ್ ಎಡನೀರು, ಆಬಿದ್ ಅರಂಗಾಡಿ, ಅಝರುದ್ದೀನ್, ಸಿದ್ದಿಕ್ ಮಂಜೇಶ್ವರ, ಶಹಾದ್, ಶಾನ್ ವಾಜ್, ಇರ್ಷಾದ್ ಮೊಗ್ರಾಲ್ ನೇತೃತ್ವ ನೀಡಿದರು.

















