ಏಕ ಕಾಲದಲ್ಲಿ ಎರಡೂ ಕೈಗಳಿಂದ ಬರೆದು ವಿಶ್ವ ದಾಖಲೆ ಮಾಡಿದ ಮಂಗಳೂರಿನ ಬಾಲಕಿ

ಮಂಗಳೂರು,ಸೆ.14: ಏಕ ಕಾಲದಲ್ಲಿ ಎರಡೂ ಕೈಗಳಿಂದ ಆಂಗ್ಲ ಪದಗಳನ್ನು ನಿಮಿಷವೊಂದಕ್ಕೆ 45 ಪದಗಳಂತೆ ಬರೆದು ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಪ್ರತಿಭೆ ಆದಿ ಸ್ವರೂಪ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಉತ್ತರ ಪ್ರದೇಶದ ಬರೇಲಿಯಾ ಟಾಟಾ ಫೌಂಡೇಶನ್ ಸಂಸ್ಥೆ ಈಕೆಯ ಈ ಸಾಧನೆಯನ್ನು ದಾಖಲಿಸಿ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ದಾಖಲೆ ಎಂದು ಘೋಷಿಸಿರುವುದಾಗಿ ಸಂಸ್ಥೆಯ ನಿರ್ದೇಶಕ ಗೋಪಾಡ್ಕರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕರಾದ ಗೋಪಾಡ್ಕರ್ ಹಾಗೂ ಸುಮಾಡ್ಕರ್ ದಂಪತಿಗಳ ಪುತ್ರಿ ಆದಿ ಸ್ವರೂಪ ಬಹುಮುಖ ಪ್ರತಿಭೆಯನ್ನು ಮೈಗೂಡಿಸಿಕೊಂಡಿದ್ದು ಇದೀಗ ಎರಡೂ ಕೈಗಳಲ್ಲಿ ಅತೀ ವೇಗವಾಗಿ ಹತ್ತು ಶೈಲಿಯಲ್ಲಿ ಬರೆಯುವ ಸಾಮರ್ಥ್ಯ ಪಡೆದಿದ್ದಾಳೆ ಎಂದು ಗೋಪಾಡ್ಕರ್ ತಿಳಿಸಿದ್ದಾರೆ.
ಬಹು ಮುಖ ಪ್ರತಿಭೆ: ಔಪಚಾರಿಕ ಶಾಲಾ ಶಿಕ್ಷಣ ಪದ್ಧತಿಗೆ ಸೇರದೆ ಸ್ವಯಂ ಕಲಿಕೆಯ ಮೂಲಕ ತನ್ನ ಒಂದೂವರೆ ವರ್ಷದಲ್ಲಿಯೇ ಓದಲು ಮತ್ತು ಎರಡೂವರೆ ವರ್ಷದಲ್ಲಿ ಸುಮಾರು 30 ಪುಟ ಬರೆಯುವ ಸಾಮರ್ಥ್ಯ ಪಡೆದುಕೊಂಡಿದ್ದು ಇದೀಗ ನೇರವಾಗಿ ಹತ್ತನೆಯ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ ಎರಡೂ ಕೈಗಳಿಂದ ಬರೆಯುವ ಸಿದ್ಧತೆಯಲ್ಲಿದ್ದಾಳೆ. ಗಿಟಾರ್, ಕೀ ಬೋರ್ಡ್, ಹಿಂದೂ ಸ್ಥಾನಿ ಸಂಗೀತವನ್ನು ಅಭ್ಯಸಿಸುತ್ತಿರುವ ಆದಿ ಸ್ವರೂಪ, 7 ವರ್ಷಗಳಲ್ಲಿ 50ರಷ್ಟು ಯಕ್ಷಗಾನ ಪ್ರದರ್ಶನ ನೀಡಿದ್ದಾಳೆ. ಆಕೆಯ ಹಾಡಿನ ಹಲವು ಸಿಡಿಗಳು ರಚನೆಯಾಗಿವೆ. ಸ್ವರೂಪ ಅಧ್ಯಯನ ಕೇಂದ್ರದ ಮೂಲಕ ರಾಜ್ಯಾದ್ಯಂತ ಹಮ್ಮಿಕೊಂಡ ಶಿಕ್ಷಣ ಜಾಥದಲ್ಲಿ 1600 ಕಡೆಗಳಲ್ಲಿ ಆದಿ ಸ್ವರೂಪ ತನ್ನ ಪ್ರತಿಭಾ ಪ್ರದರ್ಶನವನ್ನು ತನ್ನ ಎರಡೂವರೆ ವರ್ಷದಲ್ಲಿಯೇ ನೀಡಿದ್ದಾಳೆ. ರೂಬಿಕ್ ಕ್ಯೂಬ್ ಅನ್ನು 45 ಸೆಕೆಂಡ್‌ಗಳಲ್ಲಿ ಜೋಡಿಸುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ ಪ್ರಥ್ವೀಶ್ ಬ್ರಹ್ಮಾವರ ಇವರ ತಂಡದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾಳೆ ಎಂದು ಗೋಪಾಡ್ಕರ್ ತಿಳಿಸಿದ್ದಾರೆ.
ಸ್ವರೂಪದ ವಿಶೇಷ ತಂತ್ರವಾದ ವಿಷ್ಯುಯಲ್ ಮೆಮೊರಿ ಆರ್ಟ್ ಮೂಲಕ ಒಂದು ಪೂರ್ಣ ಪಾಠ ಪುಸ್ತಕವನ್ನು ಒಂದೇ ಹಾಳೆಯಲ್ಲಿ ಬಿಡಿಸಿ ದಾಖಲೆಯನ್ನು ಆದಿ ಸ್ವರೂಪ ಮಾಡಿದ್ದಾಳೆ. ಸಾವಿರ ವಸ್ತುಗಳ ಹೆಸರುಗಳನ್ನು 4-5 ಸೆಕೆಂಡ್‌ಗಳಲ್ಲಿ ದಾಖಲಿಸಿಕೊಂಡು ಹೇಳುವ ಸಾಧನೆ ದಾಖಲೆಗೆ ಸಿದ್ಧವಾಗಿದೆ. ಅದೇ ರೀತಿ ಈಕೆ ನಮ್ಮ ರಾಜ್ಯದ ಎಲ್ಲಾ ತಾಲೂಕುಗಳ ಹೆಸರು, ದೇಶದ 736 ಜಿಲ್ಲೆಗಳ ಹೆಸರು ಸೇರಿದಂತೆ ಸಾಕಷ್ಟು ವಿಷಯಗಳನ್ನು ನೆನಪಿಸಿಕೊಂಡು ಹೇಳುವ ತಂತ್ರಗಾರಿಕೆಯನ್ನು ಹೊಂದಿದ್ದಾಳೆ. ಔಪಚಾರಿಕ ಶಿಕ್ಷಣಕ್ಕೆ ಸೇರದೆ 15ನೆ ವರ್ಷದ ಆದಿ ಸ್ವರೂಪ ಈ ವರ್ಷ ಹತ್ತನೆ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ ಬರೆಯುವ ತೀರ್ಮಾನ ಮಾಡಿದ್ದಾಳೆ. 13 ಮಂದಿ ಏಕ ಕಾಲದಲ್ಲಿ ಹೇಳಿರುವುದನ್ನು ಗ್ರಹಿಸಿಕೊಂಡು ಅದಕ್ಕೆ ಉತ್ತರಿಸುವ ತ್ರಯೋದಶ ಅವಧಾನ ಕಲೆಯನ್ನು ದೇಶಾದ್ಯಂತ 1200 ಕಡೆಗಳಲ್ಲಿ ಆದಿ ಸ್ವರೂಪ ಪ್ರದರ್ಶನ ಮಾಡಿ ಪ್ರಶಂಸೆಗೆ ಪಡೆದಿದ್ದು, ಮುಂದೆ ಶೋಡಷ ಅವಧಾನ ಪ್ರದರ್ಶನ ನಡೆಸುವ ಬಗ್ಗೆ ಅಭ್ಯಾಸದಲ್ಲಿ ತೊಡಗಿರುವುದಾಗಿ ಗೋಪಾಡ್ಕರ್ ತಿಳಿಸಿದ್ದಾರೆ.
ಈ ಸಾಧನೆಯ ಬಗ್ಗೆ ಆದಿ ಸ್ವರೂಪಳ ತಂದೆ -ತಾಯಿ ಹಾಗೂ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕರಾದ ಗೋಪಾಡ್ಕರ್ ಹಾಗೂ ಸುಮಾಡ್ಕರ್ ಹೇಳುವಂತೆ ‘‘ ಇದು ದಾಖಲೆಗಾಗಿ ಗಾಖಲೆ ಅಲ್ಲ. ಪ್ರತಿಯೊಬ್ಬ ಮಗುವೂ ವಿಶೇಷ ಪ್ರತಿಭೆಯನ್ನು ಹೊಂದಿರುತ್ತದೆ. ದಿನದ 16 ಗಂಟೆಯನ್ನು ಸದ್ಭಳಕೆ ಮಾಡಿಕೊಂಡರೆ ಶಾಲಾ ಪಠ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕಳೊಂದಿಗೆ ಒಂದು ವಿಷಯದಲ್ಲಾದರೂ ಸಾಧಕರಾಗಬಹುದು. ಈ ರೀತಿಯ ಕಲಿಕೆ ಶಿಕ್ಷಣ ಕ್ಷೇತ್ರದ ಕಲಿಕೆಗೆ ಕೊಡುಗೆ ಮತ್ತು ಹೊಸ ಸಾಧ್ಯತೆಗಳನ್ನು ತೆರದುಕೊಳ್ಳಲು ಸಹಾಯವಾಗುತ್ತದೆ’ ಎನ್ನುತ್ತಾರೆ.
‘‘ಔಪಚಾರಿಕ ಶಿಕ್ಷಣದಲ್ಲಿ ಅಂಕಗಳಿಗೆ ಸೀಮಿತಗೊಳಿಸುವ ಶಿಕ್ಷಣದ ಪದ್ಧತೆಯಿಂದ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ಅರಳಲು ಸಾಧ್ಯವಾಗುವುದಿಲ್ಲ. ಮಗು ಆಸಕ್ತಿಯಿಂದ, ಕುತೂಹಲದೊಂದಿಗೆ ತನ್ನ ಸುತ್ತಲಿನ ಪರಿಸರ ಒಡನಾಟದಿಂದ ಭಯದಿಂದ ಮುಕ್ತವಾದ ವಾತವರಣದೊಂದಿಗೆ ಹೆಚ್ಚಿನ ವಿಷಯಗಳನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾದ ತಂತ್ರಗಳನ್ನು ಕಲಿತುಕೊಳ್ಳಲು ಪ್ರೇರಣೆ ನೀಡಿದಾಗ ಕಲಿಕೆಯೂ ವಿದ್ಯಾರ್ಥಿಗಳಿಗೆ ಒಂದು ಹೊರೆಯಾಗುವುದಿಲ್ಲ’’ ಎಂದು ಗೋಪಾಡ್ಕರ್ ಅಭಿಪ್ರಾಯ ಪಡುತ್ತಾರೆ.











