ಮಂಜೇಶ್ವರ ಶಾಸಕ ಖಮರುದ್ದೀನ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ; ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

ಕಾಸರಗೋಡು, ಸೆ.14: ವಂಚನೆ ಆರೋಪಕ್ಕೆ ಸಿಲುಕಿರುವ ಮಂಜೇಶ್ವರ ಶಾಸಕ ಎಂ.ಸಿ ಖಮರುದ್ದೀನ್ ರಾಜೀನಾಮೆ ನೀಡಬೇಕು, ಕೂಡಲೇ ಶಾಸಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಇಂದು ಕಾಸರಗೋಡು ತಾಲೂಕು ಕಚೇರಿಗೆ ಜಾಥಾ ನಡೆಸಿದ್ದು, ಪೊಲೀಸ್ ಬ್ಯಾರಿಕೇಡ್ ಬೇಧಿಸಿ ಮುನ್ನುಗ್ಗಲೆತ್ನಿಸಿದ ಕಾರ್ಯಕರ್ತರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು.
ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಬ್ಯಾರಿಕೇಡ್ ಗಳನ್ನು ತೆಗೆದು ಒಳನುಗ್ಗಲು ಯತ್ನಿಸಿದ್ದು, ಪೊಲೀಸರು ಮೂರು ಬಾರಿ ಜಲಫಿರಂಗಿ ಬಳಸಿದರು.
ಪ್ರತಿಭಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಉಪಾಧ್ಯಕ್ಷ ಸದಾನಂದ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎನ್.ಸತೀಶ್, ಸವಿತಾ ಟೀಚರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಎಂ. ಜನನಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು, ಪಿ.ಆರ್ ಸುನಿಲ್, ಹರೀಶ್ ನಾರಂಪಾಡಿ, ಸುಕುಮಾರ ಕುದ್ರೆಪ್ಪಾಡಿ ಮೊದಲಾದವರು ಪಾಲ್ಗೊಂಡಿದ್ದರು.
















