ಧಾರವಾಡ ಜಿ.ಪಂ. ಸದಸ್ಯನ ಕೊಲೆ ಪ್ರಕರಣ: ಮಾಜಿ ಸಚಿವರ ವಿನಯ್ ಕುಲಕರ್ಣಿ ಸಹೋದರನ ವಿಚಾರಣೆ
ಬೆಂಗಳೂರು, ಸೆ.14: ಜಿ.ಪಂ. ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿಯನ್ನು ಸಿಬಿಐ ವಿಚಾರಣೆಗೊಳಪಡಿಸಿದೆ.
ಸೋಮವಾರ ನಗರದ ಹೆಬ್ಬಾಳ ಬಳಿಯ ಸಿಬಿಐ ರಾಜ್ಯ ಕೇಂದ್ರ ಕಚೇರಿಯಲ್ಲಿ ಎಸ್ಪಿ ಥಾಮ್ಸನ್ ಜೋಸ್ ನೇತೃತ್ವದ ತಂಡ ವಿಚಾರಣೆ ನಡೆಸಿದ್ದು, ವಿಜಯ್ ಕುಲಕರ್ಣಿ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದೆ.
2016ನೇ ಸಾಲಿನಲ್ಲಿ ಧಾರವಾಡದಲ್ಲಿ ಜಿ.ಪಂ. ಸದಸ್ಯ ಯೋಗೇಶ್ ಗೌಡ ಅವರ ಕೊಲೆ ನಡೆದಿತ್ತು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿತ್ತು. ತದನಂತರ ಸ್ಥಳೀಯ ರಾಜಕೀಯ ಮುಖಂಡರ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕೈವಾಡದಿಂದ ಕೊಲೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು.
ಇದಾದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿತ್ತು. ಇದೀಗ ಸಿಬಿಐ ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳಿಗೆ ರಾಜ್ಯ ಪೊಲೀಸರು ಪ್ರಕರಣದಲ್ಲಿ ಆರೋಪಿಗಳ ಜೊತೆ ಕೈಜೋಡಿಸಿರುವುದು ತಿಳಿದು ಬಂದಿತ್ತು. ಸದ್ಯ 7 ಮಂದಿ ಪೊಲೀಸರಿಗೂ ಬಂಧನದ ಭೀತಿ ಎದುರಾಗಿದ್ದು, ಅದರಲ್ಲಿ ಓರ್ವ ಅಧಿಕಾರಿ ನಿವೃತ್ತಿ ಹೊಂದಿದ್ದಾರೆ. ಉಳಿದ 6 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಆರೋಪಿಗಳ ಜೊತೆ ನಡೆಸಿರುವ ಸಂಭಾಷಣೆ, ಫೋನ್ ಕರೆಯ ಮಾಹಿತಿ ಡಿಟೇಲ್ಸ್, ಕೆಲ ಸಿಸಿಟಿವಿ ದೃಶ್ಯಗಳು, ಸಾಂದರ್ಭಿಕ ಸಾಕ್ಷಿಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ವಿಜಯ್ ಕುಲಕರ್ಣಿ ವಿಚಾರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.







