ಕೇಂದ್ರದ ಹೊಸ ಪ್ಲ್ಯಾನ್: ವಿದ್ಯುತ್ ನಿಂದಲೇ ಅಡುಗೆಗೆ ವ್ಯವಸ್ಥೆ !

ಹೊಸದಿಲ್ಲಿ: ದೇಶದ ಜನರು ಅಡುಗೆ ತಯಾರಿಗೆ ವಿದ್ಯುತ್ತನ್ನು ಬಳಸುವಂತಾಗಲು ಹೊಸ ಯೋಜನೆಯೊಂದನ್ನು ರೂಪಿಸುತ್ತಿರುವುದಾಗಿ ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಇಂದು ಹೇಳಿದ್ದಾರೆ. ಸರಕಾರದ ಈ ಯೋಜನೆಯಿಂದ ಜನರು ಪ್ರತಿದಿನದ ಅವಶ್ಯಕತೆಗೆ ವ್ಯಯಿಸುವ ವೆಚ್ಚವೂ ಕಡಿಮೆಯಾಗಲಿದೆ ಎಂದವರು ಹೇಳಿದ್ದಾರೆ.
ಬಿಹಾರದ ನಬಿನಗರ್ ನಲ್ಲಿ ಎನ್ ಟಿಪಿಸಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಮದುಗಳನ್ನು ಕಡಿಮೆಗೊಳಿಸುವ ಮತ್ತು ದೇಶವನ್ನು ಸ್ವಾವಲಂಬಿಯನ್ನಾಗಿಸುವ ಉದ್ದೇಶವೂ ಈ ನಡೆಯ ಹಿಂದಿದೆ ಎಂದವರು ಹೇಳಿದ್ದಾರೆ. ಈ ಸಂಬಂಧ ಸಚಿವಾಲಯದ ಮಟ್ಟದಲ್ಲಿ ‘ಪವರ್ ಫೌಂಡೇಶನ್’ ಅನ್ನು ರಚಿಸಲಾಗುವುದು ಎಂದವರು ಇದೇ ಸಂದರ್ಭ ಹೇಳಿದರು.
“ವಿದ್ಯುತ್ ಭಾರತದ ಭವಿಷ್ಯವಾಗಿದೆ ಮತ್ತು ಭಾರತದ ಹೆಚ್ಚಿನ ಮೂಲಸೌಕರ್ಯ ವ್ಯವಸ್ಥೆಗಳು ವಿದ್ಯುತ್ ನಿಂದಲೇ ಕಾರ್ಯ ನಿರ್ವಹಿಸಲಿದೆ. ವಿದ್ಯುತ್ ಕ್ಷೇತ್ರವನ್ನು ಬಲಪಡಿಸುವ ಆಶಯ ಸರಕಾರಕ್ಕಿದ್ದು, ಇದರಲ್ಲಿ ಅಡುಗೆಗೆ ಸಂಪೂರ್ಣ ವಿದ್ಯುತ್ ಬಳಕೆಯೂ ಸೇರಿದೆ. ಈ ಸರಕಾರವು ಬಡವರಿಗಾಗಿ ಇದೆ ಮತ್ತು ಈ ಕ್ರಮವು ಸಮಾಜದ ಬಡ ಜನರು ಕಡಿಮೆ ವೆಚ್ಚದಲ್ಲಿ ಅಡುಗೆಗಳನ್ನು ತಯಾರಿಸಲು ನೆರವಾಗಲಿದೆ” ಎಂದವರು ಹೇಳಿದ್ದಾರೆ.





