ಬೆಳ್ತಂಗಡಿ: ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಬೆಳ್ತಂಗಡಿ: ಕ್ರೀಯಾಶೀಲತೆಯ, ಸದಾ ಚಟುವಟಿಕೆಯುಳ್ಳ, ಇಚ್ಛಾಶಕ್ತಿಯ ಶಾಸಕರು ಸಿಕ್ಕಿರುವುದರಿಂದ ಬೆಳ್ತಂಗಡಿ ಪರಿವರ್ತನೆಯ ಹಾದಿಯಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಪ್ರಶಂಸಿಸಿದ್ದಾರೆ. ಬೆಳ್ತಂಗಡಿಗೆ ಪ್ರಧಾನಮಂತ್ರಿ ಸಡಕ್ ಯೋಜನೆಯಲ್ಲಿ ಮಂಜೂರಾದ ವಿವಿದೆಡೆಯ ನಾಲ್ಕು ರಸ್ತೆಗಳಿಗೆ ರೂ. 52 ಕೋಟಿಯ 61 ಲಕ್ಷದ 36 ಸಾವಿರದ ಕಾಮಗಾರಿಗಳಿಗೆ ಸೋಮವಾರ ಉಜಿರೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
"ದಿ. ಅಟಲ್ ಜಿ ಅವರ ಕನಸಾಗಿದ್ದ ಈ ಯೋಜನೆಗೆ 2009 ರಿಂದ 2014 ರವರೆಗೆ ಯುಪಿಎ ಸರಕಾರ ಒಂದು ರೂ.ಗಳನ್ನೂ ಕರ್ನಾಟಕಕ್ಕೆ ನೀಡಿಲ್ಲ. ಇದೀಗ ಮೋದಿ ಸರಕಾರ ಮತ್ತೆ ಸಡಕ್ ಯೋಜನೆಯನ್ನು ಪ್ರಾರಂಭಿಸಿದ್ದು ಮೊದಲ ಹಂತದಲ್ಲಿ ದ.ಕ. ಕ್ಕೆ 150 ಕೋಟಿ ರೂ. ಅನುದಾನ ದೊರಕಿದೆ" ಎಂದರು.
ಕಳೆದ 30 ವರ್ಷಗಳಲ್ಲಿ ಕಾಣದ ಅಭಿವೃದ್ದಿ ಹರೀಶ್ ಪೂಂಜ ಅವರಿಂದ ಆಗುತ್ತಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ, ಮೂಲಭೂತ ಸೌಕರ್ಯದಲ್ಲಿ ಬೆಳ್ತಂಗಡಿ ಮೊದಲ ಸ್ಥಾನದಲ್ಲಿದೆ. ತಾಲೂಕಿಗೆ ಶಾಶ್ವತ ಕೊಡುಗೆ ಏನು ಎಂಬುದು ಮುಖ್ಯವೇ ಹೊರತು ಚುನಾವಣೆಯಲ್ಲಿ ನಾಲ್ಕೈದು ಬಾರಿ ಗೆಲ್ಲುವುದು ಸಾಧನೆಯಾಗುವುದಿಲ್ಲ. ತಾಲೂಕಿಗೆ ಶಾಶ್ವತ ವಾಗಿರಗಿರುವ ಯಾವ ಯೋಜನೆ ತಂದಿದ್ದೀರಿ ಎಂದು ಮಾಜಿ ಶಾಸಕರನ್ನು ಪರೋಕ್ಷವಾಗಿ ಟೀಕಿಸಿದರು.
ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ಚತುಷ್ಪಥ ರಸ್ತೆಗೆ ಎರಡನೇ ಹಂತದ ಕಾಮಗಾರಿಗೆ ಅನಮೋದನೆ ಸಿಕ್ಕಿದೆ. ಅದು ಶೀಘ್ರವಾಗಿ ಆರಂಭವಾಗಲಿದೆ. ಕೇಂದ್ರ ಸರಕಾರವು ಕುಡಿಯುವ ನೀರಿನ ಯೋಜನೆಗಳಿಗೆ, ನರೇಗಾಕ್ಕೆ ಗ್ರಾ .ಪಂ.ಗೇ ನೇರ ಅನುದಾನ ನೀಡಲಿದ್ದು, ಆತ್ಮನಿರ್ಭರ ಭಾರತವನ್ನು ಗ್ರಾಮಗಳ ಮೂಲಕ ನಿರ್ಮಿಸಲು ಕೇಂದ್ರ ಸರಕಾರ ಸಂಕಲ್ಪಿಸಿದೆ ಎಂದು ಅವರು ಹೇಳಿದರು
ಶಾಸಕ ಪೂಂಜ ಮಾತನಾಡಿ, ತಾಲೂಕಿನ ನವ ನಿರ್ಮಾಣಕ್ಕೆ ನಳಿನ್ ಅವರು ವಿವಿಧ ರೀತಿಯಲ್ಲಿ ಸಹಕಾರ ನೀಡಿರುವುದನ್ನು ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ಸದಸ್ಯೆ ಸೌಮ್ಯಲತಾ, ತಾ.ಪಂ.ಸದಸ್ಯ ಶಶಿಧರ ಕಲ್ಮಂಜ, ಕೃಷ್ಣಯ್ಯ ಆಚಾರ್,ಸುಧೀರ ಸುವರ್ಣ, ವಸಂತಿ, ಸುಶೀಲಾ, ಬಿಜೆಪಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಇಂಜಿನಿಯರ್ ಪ್ರಭಾಕರ ಸ್ವಾಗತಿಸಿದರು. ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ ವಂದಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.







