ಸರಕಾರಿ ವೈದ್ಯಾಧಿಕಾರಿಗಳ ಮುಷ್ಕರ: ಉಡುಪಿ ಜಿಲ್ಲೆಯ ದೈನಂದಿನ ಕೋವಿಡ್ ವರದಿ ಇಲ್ಲ

ಉಡುಪಿ, ಸೆ.14: ಸರಕಾರಿ ವೈದ್ಯಾಧಿಕಾರಿಗಳು ತಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸದೆ ಇರುವ ಕಾರಣ ಸೆ.15ರಿಂದ ಸೆ.20ರವರೆಗೆ ಆನ್‌ಲೈನ್ ಸಹಿತ ಎಲ್ಲಾ ಕರ್ತವ್ಯಗಳಿಂದ ದೂರವುಳಿಯುವ ನಿರ್ಧಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಉಡುಪಿಯ ವೈದ್ಯರು ಕೋವಿಡ್-19ಕ್ಕೆ ಸಂಬಂಧಿಸಿದಂತೆ ಎಲ್ಲಾ ಕರ್ತವ್ಯವನ್ನು ಇಂದಿನಿಂದಲೇ ನಿಲ್ಲಿಸಿರುವುದರಿಂದ ಜಿಲ್ಲೆಯಲ್ಲಿ ಪ್ರತಿದಿನ ಜಿಲ್ಲಾ ಆರೋಗ್ಯ ಇಲಾಖೆಯಿಂದ ಪ್ರಕಟಗೊಳ್ಳುವ ದಿನದ ಕೋವಿಡ್-19 ಬುಲೆಟಿನ್ ಇಂದು ಪ್ರಕಟಗೊಳ್ಳಲಿಲ್ಲ.
ಇದರಿಂದ ಕೊರೋನಕ್ಕೆ ಸಂಬಂಧಿಸಿದಂತೆ ಯಾವುದೇ ವಿವರ, ಅಂಕಿಅಂಶ, ವರದಿ ಇಂದು ಇಲಾಖೆಯ ಕೈಸೇರಿಲ್ಲ. ಹೀಗಾಗಿ ದಿನದ ಬುಲೆಟಿನ್‌ನ್ನು ಇಂದು ಪ್ರಕಟಿಸಲಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾ ಸಮಿತಿ ಇಂದು ಪತ್ರಿಕಾಗೋಷ್ಠಿ ನಡೆಸಿ ನಾಳೆಯಿಂದ ಸೆ.20ರವರೆಗೆ ಮೊದಲ ಹಂತದ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದ್ದರೂ, ಇಂದು ಅಪರಾಹ್ನ ನಡೆಸಿದ ಸಭೆಯಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಇಂದಿನಿಂದಲೇ ಯಾವುದೇ ಮಾಹಿತಿ ನೀಡದಿರಲು ನಿರ್ಧರಿಸಿದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಹೀಗಾಗಿ ಸರಕಾರ ಇವರ ಬೇಡಿಕೆಗಳಿಗೆ ಒಪ್ಪಿ ಮುಷ್ಕರ ನಿಲ್ಲುವವರೆಗೆ ಕೋವಿಡ್‌ಗೆ ಸಂಬಂಧಿಸಿದಂತೆ ಜಿಲ್ಲೆಯ ಯಾವುದೇ ಮಾಹಿತಿ ಪ್ರಕಟಗೊಳ್ಳುವುದಿಲ್ಲ ಎಂದು ಈ ಮೂಲ ಹೇಳಿದೆ.
ಉಡುಪಿ ಮಾತ್ರ: ರಾಜ್ಯ ಸಮಿತಿ ನಾಳೆಯಿಂದ ಮುಷ್ಕರಕ್ಕೆ ಕರೆ ಕೊಟ್ಟಿರುವುದರಿಂದ ರಾಜ್ಯದಲ್ಲಿ ಉಡುಪಿ ಹೊರತು ಪಡಿಸಿ ಉಳಿದೆಲ್ಲಾ ಜಿಲ್ಲೆಗಳ ದೈನಂದಿನ ಕೋವಿಡ್-19 ಬುಲೆಟಿನ್‌ನ್ನು ರಾಜ್ಯ ಆರೋಗ್ಯ ಇಲಾಖೆ ಇಂದು ಸಂಜೆ ವೇಳೆಗೆ ಪ್ರಕಟಿಸಿದೆ.
ಇದರಲ್ಲಿ ಉಡುಪಿಯಿಂದ ಇಂದು ಕೇವಲ 40 ಪಾಸಿಟಿವ್ ಪ್ರಕರಣಗಳ ಮಾಹಿತಿ ಇದ್ದು, ಒಟ್ಟು ಪ್ರಕರಣಗಳ ಸಂಖ್ಯೆಯನ್ನು 14086 (ನಿನ್ನೆ 14046) ಎಂದು ತೋರಿಸಲಾಗಿದೆ. ಈವರೆಗೆ ಆಸ್ಪತ್ರೆಗಳಿಂದ ಬಿಡುಗಡೆಗೊಂಡವರ ಸಂಖ್ಯೆ 12,043 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 1914 ಎಂದು ತೋರಿಸಲಾಗಿದೆ. ಉಡುಪಿಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆಯನ್ನು 129 ಎಂದು ತೋರಿಸಲಾಗಿದೆ.
ಸರಕಾರ ಇಂದು ರಾತ್ರಿಯೊಳಗೆ ಸರಕಾರಿ ವೈದ್ಯಾಧಿಕಾರಿಗಳ ಬೇಡಿಕೆಗೆ ಒಪ್ಪದೇ ಇದ್ದರೆ, ವೈದ್ಯಾಧಿಕಾರಿಗಳು ನಾಳೆಯಿಂದ ಮುಷ್ಕರ ತೊಡಗಲಿದ್ದು, ಇದರಿಂದ ನಾಳೆಯಿಂದ ಕೋವಿಡ್-19ಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಬುಲೆಟಿನ್ ಪ್ರಕಟಗೊಳ್ಳುವ ಸಾಧ್ಯತೆ ಇರುವುದಿಲ್ಲ ಎಂದು ಇಲಾಖಾ ಮೂಲ ಹೇಳಿದೆ.







