ಬ್ಯಾರಿ ಭಾಷೆಯ ಹೊಸ ‘ಲಿಪಿ’ಗೆ ಸಮಾನ ಮನಸ್ಕರ ವಿರೋಧ: ಬ್ಯಾರಿ ಭಾಷೆಗೆ ಕನ್ನಡ ‘ಲಿಪಿ’ ಬಳಸಲು ಜನಾಂದೋಲನ

ಮಂಗಳೂರು, ಸೆ.14: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಭಾಷೆಗೆ ಹೊಸ ‘ಲಿಪಿ’ಯನ್ನು ಲೋಕಾರ್ಪಣೆಗೊಳಿಸಿರುವ ಬೆನ್ನಿಗೆ ನಗರದಲ್ಲಿ ಕೆಲವು ಸಮಾನ ಮನಸ್ಕರು ಸೋಮವಾರ ಸಭೆ ಸೇರಿ ಬ್ಯಾರಿ ಭಾಷೆಯ ಹೊಸ ‘ಲಿಪಿ’ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬ್ಯಾರಿ ಭಾಷೆಗೆ ಕನ್ನಡ ಲಿಪಿಯನ್ನೇ ಮುಂದುವರಿಸುವುದಕ್ಕಾಗಿ ಜನಾಂದೋಲನ ರೂಪಿಸಲು ನಿರ್ಧರಿಸಿದ್ದಾರೆ.
‘ಈವರೆಗೆ ಬ್ಯಾರಿ ಭಾಷೆಯ ಸಾಹಿತ್ಯವು ಕನ್ನಡ ಲಿಪಿ ಬಳಸಿಕೊಂಡು ರಚಿಸಲಾಗಿದೆ. ಹೊಸ ಲಿಪಿಯಿಂದ ಬ್ಯಾರಿ ಸಾಹಿತ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಮುಂದಿನ ಪೀಳಿಗೆಯ ಬ್ಯಾರಿ ಬರಹಗಾರರು ಕೂಡ ಹೊಸ ಲಿಪಿ ಕಲಿತು ಅದರಲ್ಲಿ ಸಾಹಿತ್ಯ ರಚಿಸುವುದು ಸುಲಭವಲ್ಲ. ಈಗಾಗಲೆ ಕನ್ನಡ ಲಿಪಿ ಬಳಸಿಕೊಂಡು ರಚಿಸಲಾದ ಸಾಹಿತ್ಯ ಕೃತಿಗಳು ಕೂಡ ಮೂಲೆಪಾಲಾಗಬಹುದು. ಅಲ್ಲದೆ ಬ್ಯಾರಿ ಭಾಷೆ, ಬ್ಯಾರಿ ಸಾಹಿತ್ಯವೂ ಹಿಂದುಳಿಯುವ ಸಾಧ್ಯತೆ ಇದೆ’ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಅಭಿಪ್ರಾಯದ ಹಿನ್ನೆಲೆಯಲ್ಲಿ ಬ್ಯಾರಿ ಆಂದೋಲನದಲ್ಲಿ ಪಾಲ್ಗೊಂಡ ಸಮಾನ ಮನಸ್ಕರು ಸಭೆ ಸೇರಿ ನಡೆಸಲಾದ ಚರ್ಚೆಯಲ್ಲಿ ಬ್ಯಾರಿ ಭಾಷೆಗೂ ಕನ್ನಡಕ್ಕೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಉಲ್ಲೇಖಿಸಲಾಗಿದೆ. ಬ್ಯಾರಿ ಭಾಷೆಗೆ ಕನ್ನಡ ಲಿಪಿಯನ್ನೇ ಬಳಸುವುದಕ್ಕಾಗಿ ಸೆ.16ರಂದು ಸಂಜೆ 4 ಗಂಟೆಗೆ ನಗರದ ಕಂಕನಾಡಿಯಲ್ಲಿರುವ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜನಾಂದೋಲನ ಸಭೆ ಕರೆಯಲಾಗಿದೆ. ಈ ಸಭೆಯ ಮೂಲಕ ಹೊಸ ‘ಲಿಪಿ’ಯ ಬದಲು ಕನ್ನಡ ಲಿಪಿಯನ್ನೇ ಬ್ಯಾರಿ ಭಾಷೆಗೆ ಬಳಸಲು ಆಂದೋಲನ ಆರಂಭಿಸಲಾಗುವುದು. ಅಲ್ಲದೆ ಮುಖ್ಯಮಂತ್ರಿಗೂ ಮನವಿ ಮಾಡಲಾಗುವುದು ಎಂದು ಬಿ.ಎ.ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.
ಸಭೆಯಲ್ಲಿ ಬಿ.ಎ.ಮುಹಮ್ಮದ್ ಅಲಿ, ಜೆ.ಹುಸೈನ್, ಮುಹಮ್ಮದ್ ಕುಂಜತ್ತಬೈಲ್, ಉಮರ್ ಯು.ಎಚ್. ಲತೀಫ್ ನೇರಳಕಟ್ಟೆ, ನಿಸಾರ್ ಫಕೀರ್ ಮುಹಮ್ಮದ್, ಫಾರೂಕ್ ಉಳ್ಳಾಲ್, ಡಿ.ಎಂ.ಅಸ್ಲಂ, ಇಸ್ಮತ್ ಪಜೀರ್ ಉಪಸ್ಥಿತರಿದ್ದರು.







