ಡ್ರಗ್ಸ್ ವಿರುದ್ಧ ಎಸ್ಪಿ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ
ಉಡುಪಿ ಕಲ್ಸಂಕ ಬಳಿ ಪೊಲೀಸರಿಂದ ವಾಹನಗಳ ತಪಾಸಣೆ

ಉಡುಪಿ, ಸೆ.14: ಡ್ರಗ್ಸ್ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ನೇತೃತ್ವದಲ್ಲಿ ಪೊಲೀಸರು ಇಂದು ಉಡುಪಿ ಕಲ್ಸಂಕ ಜಂಕ್ಷನ್‌ನಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ, ವಾಹನಗಳನ್ನು ತಪಾಸಣೆ ನಡೆಸಿದರು.
ಮಣಿಪಾಲ-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸಂಶಯಾಸ್ಪದ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿ, ತಪಾಸಣೆಗೆ ಒಳಪಡಿಸಿದರು. ಅಕ್ರಮವಾಗಿ ಗಾಂಜಾ ಸೇರಿದಂತೆ ಮಾದಕದ್ರವ್ಯ ಸಾಗಾಟ ಸಂಬಂಧ ಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದರು. ಆದರೆ ಯಾವುದೇ ವಾಹನಗಳಲ್ಲಿ ಮಾದಕ ದ್ರವ್ಯ ಸಾಗಾಟಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಒಟ್ಟು 115 ಪ್ರಕರಣಗಳನ್ನು ದಾಖಲಿಸಿ, 65ಸಾವಿರ ರೂ. ದಂಡ ವಸೂಲಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ತಮ್ಮ ವಾಹನಗಳಿಗೆ ನೀಲಿ ಬಣ್ಣದ ಲೇಸರ್ ಲೈಟ್ ಆಳವಡಿಸಿದ ರಿಕ್ಷಾ ಚಾಲಕ ಹಾಗೂ ಬುಲೆಟ್ ಸವಾರನನ್ನು ತರಾಟೆಗೆ ತೆಗೆದುಕೊಂಡರು.
ಕರ್ಕಶ ಹಾರ್ನ್ ಬಳಕೆ, ಹೆಲ್ಮೆಟ್ ಧರಿಸದೆ, ಸೀಟ್‌ಬೆಲ್ಟ್ ಹಾಕದೆ ಸಂಚರಿಸಿದ ವಾಹನ ಸವಾರರು ಹಾಗೂ ಟಿಂಟ್ ಗಾಜು ಹಾಕಿರುವ ಮತ್ತು ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳ ವಿರುದ್ಧವೂ ಕ್ರಮ ಜರಗಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್, ಉಡುಪಿ ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಅಬ್ದುಲ್ ಖಾದರ್, ಉಡುಪಿ ನಗರ ಠಾಣಾಧಿಕಾರಿ ಸಕ್ತಿವೇಲು ಮೊದ ಲಾದವರು ಉಪಸ್ಥಿತರಿದ್ದರು.
ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಅದರೊಂದಿಗೆ ಗಾಂಜಾ ಸಾಗಾಟದ ಸಂಶಯದ ಮೇಲೆ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಇಂತಹ ಕಾರ್ಯಾಚರಣೆಯು ಜಿಲ್ಲೆಯಾದ್ಯಂತ ಹಂತಹಂತವಾಗಿ ನಡೆಸಲಾಗುವುದು. ಜಿಲ್ಲೆಯಲ್ಲಿ ಗಾಂಜಾ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ವಿವಿಧ ಕಡೆಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದೇವೆ.
-ವಿಷ್ಣುವರ್ಧನ್, ಎಸ್ಪಿ ಉಡುಪಿ







