ಪಾಂಬೂರು: ಕೊಳೆತ ಮೃತದೇಹದ ಗುರುತು ಪತ್ತೆ
ಶಿರ್ವ, ಸೆ.14: ಪಾಂಬೂರು ಕೆಥೋಲಿಕ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ ಇರುವ ಪೊದೆಯಲ್ಲಿ ತಲೆ ಮತ್ತು ದೇಹ ಬೇರ್ಪಟ್ಟ ಸ್ಥಿತಿಯಲ್ಲಿ ದೊರೆತ ಮೃತದೇಹದ ಗುರುತು ಪತ್ತೆ ಹಚ್ಚಲಾಗಿದೆ.
ಸೆ.13ರಂದು ಸಂಜೆ ವೇಳೆ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ತಲೆ ಬುರುಡೆ ಮತ್ತು ಶರೀರ ಬೇರೆ ಬೇರೆಯಾಗಿತ್ತು. ಮೃತದೇಹದ ಮೂಳೆಗಳು ಮಾತ್ರ ಕಾಣುತ್ತಿದ್ದು, ಬೇರೆ ಯಾವುದೇ ಗುರುತುಗಳು ಕಂಡು ಬಂದಿರುವುದಿಲ್ಲ. ಮೃತ ವ್ಯಕ್ತಿಯು ಕಳೆದ 15 ದಿವಸಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರಕರಣ ದಾಖಲಿಸಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಶಿರ್ವ ಪೊಲೀಸರು, ಮೃತರನ್ನು ಪಾಂಬೂರಿನ ರಾಜೇಶ್(35) ಎಂಬುದಾಗಿ ಪತ್ತೆ ಹಚ್ಚಿದ್ದಾರೆ. ಇವರಿಗೆ ವಿಪರೀತ ಕುಡಿತದ ಚಟ ಇದ್ದು, 15 ದಿನಗಳ ಹಿಂದೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಇವರು ವಿಪರೀತ ಕುಡಿತದಿಂದ ಅಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





