ಗಡುವಿನೊಳಗೆ ಲಸಿಕೆ ಕಾರ್ಯಕ್ರಮಕ್ಕೆ ಸೇರಿ: ಶ್ರೀಮಂತ ದೇಶಗಳಿಗೆ ಡಬ್ಲ್ಯುಎಚ್‌ಒ ಒತ್ತಾಯ

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್), ಸೆ. 14: ಕೊರೋನ ವೈರಸ್ ಸಾಂಕ್ರಾಮಿಕದ ಲಸಿಕೆ ನ್ಯಾಯೋಚಿತವಾಗಿ ಮತ್ತು ದಕ್ಷತೆಯಿಂದ ವಿತರಣೆಯಾಗುವುದನ್ನು ಖಾತರಿಪಡಿಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಕೋವ್ಯಾಕ್ಸ್ ಲಸಿಕೆ ಕಾರ್ಯಕ್ರಮಕ್ಕೆ ಶುಕ್ರವಾರದ ಗಡುವಿನೊಳಗೆ ದೇಶಗಳು ಸೇರ್ಪಡೆಗೊಳ್ಳಬೇಕು ಎಂದು ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಸೋಮವಾರ ಹೇಳಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡುವ ಲಸಿಕೆಗಳು, ಚಿಕಿತ್ಸೆಗಳು ಮತ್ತು ರೋಗಪತ್ತೆ ವಿಧಾನಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ರೂಪಿಸಿರುವ ಕೋವ್ಯಾಕ್ಸ್ ಕಾರ್ಯಕ್ರಮದ ಮೂಲಕ ಈವರೆಗೆ 92 ಕಡಿಮೆ ಆದಾಯದ ದೇಶಗಳು ನೆರವು ಕೋರುತ್ತಿವೆ ಎಂದು ಅವರು ಹೇಳಿದರು.
ಸುಮಾರು 80 ಹೆಚ್ಚಿನ ಆದಾಯದ ದೇಶಗಳು ಈ ಕಾರ್ಯಕ್ರಮದಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿವೆ. ಆದರೆ ಆ ಪೈಕಿ ಹೆಚ್ಚಿನ ದೇಶಗಳು ಈ ವಾರದ ಕೊನೆಯ ವೇಳೆಗೆ ಕಾರ್ಯಕ್ರಮಕ್ಕೆ ಸೇರ್ಪಡೆಗೊಳ್ಳುವ ತಮ್ಮ ಇಚ್ಛೆಯನ್ನು ಖಚಿತಪಡಿಸಬೇಕಾಗಿದೆ ಎಂದರು.
‘‘ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಜನರಿಗೆ ಲಸಿಕೆಗಳು ಲಭಿಸದೆ ಹೋದರೆ, ಕೊರೋನ ವೈರಸ್ ಜನರನ್ನು ಕೊಲ್ಲುವುದನ್ನು ಮುಂದುವರಿಸುತ್ತದೆ ಹಾಗೂ ಜಾಗತಿಕ ಮಟ್ಟದಲ್ಲಿ ಆರ್ಥಿಕ ಚೇತರಿಕೆ ವಿಳಂಬಗೊಳ್ಳುತ್ತದೆ’’ ಎಂದು ಟೆಡ್ರಾಸ್ ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟೆಡ್ರಾಸ್ ಹೇಳಿದರು.







