ಅಸ್ಸಾಂನ ವಿದೇಶಿಗರ ಟ್ರಿಬ್ಯೂನಲ್ನಿಂದ 7 ಮುಸ್ಲಿಂ ವಕೀಲರ ವಜಾ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ. 12: ಅಸ್ಸಾಂನ ಧುಬ್ರಿ ಜಿಲ್ಲೆಯ ಒಂದು ವಿದೇಶಿಗರ ಟ್ರಿಬ್ಯೂನಲ್(ಎಫ್ಟಿ)ನಲ್ಲಿರುವ 7 ಮಂದಿ ಮುಸ್ಲಿಂ ಸರಕಾರಿ ಉಪ ವಕೀಲರ (ಎಜಿಪಿ)ನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ಹಿಂದೂ ಸಮುದಾಯದ 7 ವಕೀಲರನ್ನು ನಿಯೋಜಿಸಲಾಗಿದೆ ಎಂದು Thewire.in ವರದಿ ಮಾಡಿದೆ.
ಅಸ್ಸಾಂ ಗಡಿ ಪೊಲೀಸ್ ಸಂಘಟನೆ ಪೌರತ್ವ ಸಂದೇಹಿಸಿ ಗುರುತಿಸಿದ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯಿಂದ ಹೊರಗುಳಿದ ವ್ಯಕ್ತಿಗಳ ಪ್ರಕರಣವನ್ನು ಮರು ಪರಿಶೀಲಿಸುವ ಅರೆ ನ್ಯಾಯಾಂಗ ಸಂಸ್ಥೆ ಈ ವಿದೇಶಿಗರ ಟ್ರಿಬ್ಯೂನಲ್.
ಧುಬ್ರಿಯ ವಿದೇಶಿಗರ ಟ್ರಿಬ್ಯೂನಲ್ (ಎಫ್ಟಿ)ನಿಂದ ವಜಾಗೊಳಿಸಲಾದ 7 ಮಂದಿ ಮುಸ್ಲಿಂ ಸರಕಾರಿ ಉಪ ವಕೀಲ (ಎಜಿಪಿ)ರಲ್ಲಿ ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 50 ವರ್ಷದ ಕಮಲ್ ಹುಸೈನ್ ಅಹ್ಮದ್ ಕೂಡ ಸೇರಿದ್ದಾರೆ ಎಂದು ‘ದಿ ಪ್ರಿಂಟ್’ ವರದಿ ಹೇಳಿದೆ. 7 ಮಂದಿ ಮುಸ್ಲಿಂ ಸರಕಾರಿ ಉಪ ವಕೀಲ (ಎಜಿಎಫ್)ರನ್ನು ವಜಾಗೊಳಿಸಿ , ಅವರ ಸ್ಥಾನಕ್ಕೆ ಹಿಂದೂ ಸಮುದಾಯಕ್ಕೆ ಸೇರಿದ ವಕೀಲರನ್ನು ನಿಯೋಜಿಸಿರುವ ಸರಕಾರದ ನಡೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.







