ಸುದರ್ಶನ್ ಟಿವಿಯ ‘ಯುಪಿಎಸ್ ಸಿ ಜಿಹಾದ್’ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ 7 ಮಾಜಿ ನಾಗರಿಕ ಸೇವಾ ಅಧಿಕಾರಿಗಳು

ಜೈಪುರ: ಸರಕಾರಿ ಸೇವೆಗಳಲ್ಲಿ ಮುಸ್ಲಿಮರ ನುಸುಳುವಿಕೆ ಎಂದು ಪ್ರತಿಪಾದಿಸಿದ್ದ ‘ಸುದರ್ಶನ್ ನ್ಯೂಸ್’ನ ಕಾರ್ಯಕ್ರಮ ‘ಯುಪಿಎಸ್ಸಿ ಜಿಹಾದ್’ ವಿರುದ್ಧ 7 ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾರ್ಯಕ್ರಮಕ್ಕೆ ತಡೆಯಾಜ್ಞೆ ವಿಧಿಸುವಂತೆ ಕೋರಲಾಗಿದೆ.
‘ಬಿಂದಾಸ್ ಬೋಲ್’ ಎನ್ನುವ ಸುದರ್ಶನ್ ಟಿವಿಯ ಮುಖ್ಯ ಸಂಪಾದಕ ಸುರೇಶ್ ಚವಾಣಕೆ ಅವರ ಕಾರ್ಯಕ್ರಮದ ಸರಣಿಯಲ್ಲಿ ‘ಯುಪಿಎಸ್ ಸಿ ಜಿಹಾದ್’ ಒಂದಾಗಿದೆ.
ಆಗಸ್ಟ್ 28ರಂದು ಈ ಬಗ್ಗೆ ಸುಪ್ರೀಂ ಕೋರ್ಟ್ ಯಾವುದೇ ಕಾರ್ಯಕ್ರಮ ಪ್ರಸಾರಕ್ಕೆ ಮುಂಗಡವಾಗಿ ತಡೆ ನೀಡಲು ಸಾಧ್ಯವಿಲ್ಲ ಎಂದಿತ್ತು. ಆಗಸ್ಟ್ 28ರಂದು ಕಾರ್ಯಕ್ರಮ ಪ್ರಸಾರವಾಗುವುದಾಗಿ ನಿಗದಿಯಾಗಿತ್ತು. ಆದರೆ ಹೈಕೋರ್ಟ್ ಕಾರ್ಯಕ್ರಮ ಪ್ರಸಾರಕ್ಕೆ ತಡೆ ವಿಧಿಸಿತು. ಸೆಪ್ಟಂಬರ್ 9ರಂದು ಈ ಬಗ್ಗೆ ಪ್ರಕಟನೆ ಹೊರಡಿಸಿದ್ದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿ ನೀಡಿತ್ತು.
ನಿವೃತ್ತ ಐಎಎಸ್ ಅಧಿಕಾರಿ ಅಮಿತಾಭ ಪಾಂಡೆ, ನಿವೃತ್ತ ಐಎಫ್ ಎಸ್ ಅಧಿಕಾರಿ ನವ್ರೇಖಾ ಶರ್ಮಾ, ನಿವೃತ್ತ ಐಎಫ್ ಎಸ್ ಅಧಿಕಾರಿ ದೇವ್ ಮುಖರ್ಜಿ, ನಿವೃತ್ತ ಐಎಎಸ್ ಅಧಿಕಾರಿ ಸುಂದರ್ ಬುರ್ರಾ, ನಿವೃತ್ತ ಐಎಎಸ್ ಅಧಿಕಾರಿ ಮೀನಾ ಗುಪ್ತಾ, ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಕೆ. ದೇವ್ ಮತ್ತು ಅರ್ಧೇಂದು ಸೇನ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಾವು ಕಾನ್ ಸ್ಟಿಟ್ಯೂಶನಲ್ ಕಂಡಕ್ಟ್ ಗ್ರೂಪ್ ಸಮಿತಿಯ ಸದಸ್ಯರು ಎಂದಿದ್ದಾರೆ.
ದ್ವೇಷದ ಮಾತಿನ ವ್ಯಾಪ್ತಿ ಮತ್ತು ಅರ್ಥವನ್ನು ನಿರ್ದಿಷ್ಟಪಡಿಸಿ ಅಧಿಕೃತ ತೀರ್ಪು ನೀಡುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ.







