ದೇಶದಲ್ಲಿ 80 ಸಾವಿರದ ಗಡಿ ದಾಟಿದ ಕೊರೋನ ಸಾವು

ಹೊಸದಿಲ್ಲಿ, ಸೆ.15: ಕೊರೋನ ವೈರಸ್ ಸೋಂಕಿನಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 80 ಸಾವಿರದ ಗಡಿ ದಾಟಿದೆ. ಕಳೆದ 19 ದಿನಗಳಲ್ಲಿ 20 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದು, ಕಳೆದ ಹದಿನೈದು ದಿನಗಳಲ್ಲಿ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಕೋವಿಡ್-19 ಸಾವನ್ನು ಭಾರತ ಕಂಡಿದೆ. ದೇಶದಲ್ಲಿ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಸರಾಸರಿ ದಿನಕ್ಕೆ ಸಾವಿರಕ್ಕಿಂತ ಅಧಿಕ.
ಸೋಮವಾರ ದೇಶದಲ್ಲಿ 1070 ಸೋಂಕಿತರು ಕೊನೆಯುಸಿರೆಳೆದಿದ್ದು, ಒಟ್ಟು ಮೃತರ ಸಂಖ್ಯೆ 80,737ಕ್ಕೇರಿದೆ. ಕಳೆದ ಹದಿನಾಲ್ಕು ದಿನಗಳಲ್ಲಿ ಒಂದು ದಿನ ಮಾತ್ರ ಅಂದರೆ ಸೆಪ್ಟೆಂಬರ್ 6ರಂದು ಸಾವಿನ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಇತ್ತು. ಸೆಪ್ಟೆಂಬರ್ 6ರಂದು 994 ಮಂದಿ ಸೋಂಕಿಗೆ ಬಲಿಯಾಗಿದ್ದರು. ಈ ತಿಂಗಳ ಮೊದಲ 14 ದಿನಗಳಲ್ಲಿ 15364 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಮವಾರ ಹೊಸ ಪ್ರಕರಣಗಳ ಸಂಖ್ಯೆ 80663ಕ್ಕೆ ಇಳಿದಿದೆ. ರವಿವಾರ 94 ಸಾವಿರ ಪ್ರಕರಣಗಳು ವರದಿಯಾಗಿದ್ದವು. ಸಾಮಾನ್ಯವಾಗಿ ಪ್ರತಿ ಸೋಮವಾರ ಕಡಿಮೆ ಸಂಖ್ಯೆಯ ಪರೀಕ್ಷೆಗಳು ನಡೆಯುವ ಕಾರಣದಿಂದ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ.
35.7 ಲಕ್ಷ ಮಂದಿ ಸೋಂಕಿತರು ಗುಣಮುಖರಾದ ಬ್ರೆಝಿಲ್ ದೇಶವನ್ನು ಹಿಂದಿಕ್ಕಿದ ಭಾರತ, ಗರಿಷ್ಠ ಸೋಂಕಿತರು ಗುಣಮುಖರಾದ ದೇಶಗಳ ಪೈಕಿ ಎರಡನೇ ಸ್ಥಾನಕ್ಕೇರಿದೆ. ಅಮೆರಿಕದಲ್ಲಿ ಮಾತ್ರ ಭಾರತಕ್ಕಿಂತ ಅಧಿಕ ಅಂದರೆ 39.8 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ ಒಟ್ಟು 38,49,152 ಮಂದಿ ಇದುವರೆಗೆ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಸೋಮವಾರ ಒಡಿಶಾ (4198), ಮಧ್ಯಪ್ರದೇಶ (2483) ಮತ್ತು ರಾಜಸ್ಥಾನ (1730) ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳಲ್ಲಿ ಸೋಮವಾರ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ಐದು ದಿನಗಳಿಂದ 22 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಸೋಮವಾರ 17066 ಪ್ರಕರಣಗಳು ಕಂಡುಬಂದಿವೆ.







