ಆಗ್ರಾ ಮೊಘಲ್ ಮ್ಯೂಸಿಯಂ ಇನ್ನು ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ!

ಆಗ್ರಾ, ಸೆ.15: ಇಲ್ಲಿನ ಪ್ರಖ್ಯಾತ ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ ಎಂದು ಉತ್ತರ ಪ್ರದೇಶ ಸರ್ಕಾರ ಮರುನಾಮಕರಣ ಮಾಡಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಆಗ್ರಾ ಅಧಿಕಾರಿಗಳ ಜತೆ ಸೋಮವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
"ಮೊಘಲರು ನಮ್ಮ ಹೀರೊಗಳಾಗಲು ಹೇಗೆ ಸಾಧ್ಯ" ಎಂದು ಸಭೆಯಲ್ಲಿ ಮುಖ್ಯಮಂತ್ರಿ ಪ್ರಶ್ನಿಸಿದರು ಎಂದು ಉನ್ನತಾಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ತಾಜ್‌ಮಹಲ್ ಸಮೀಪ ವಸ್ತು ಸಂಗ್ರಹಾಲಯ ನಿರ್ಮಾಣ ಕಾರ್ಯವನ್ನು 2016ರಲ್ಲಿ ಆರಂಭಿಸಿ, 2017ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ನಿರ್ಮಾಣ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಅನುದಾನ ಕೊರತೆಯಿಂದ ನಿರ್ಮಾಣ ಕಾರ್ಯ ವಿಳಂಬವಾಗಿದೆ ಎನ್ನಲಾಗಿದೆ. ಜತೆಗೆ ಮ್ಯೂಸಿಯಂಗೆ ಹಂಚಿಕೆ ಮಾಡಲಾದ 5.9 ಎಕರೆ ಜಮೀನಿನಲ್ಲಿ ರಾಜ್ಯ ವಿದ್ಯುತ್ ಇಲಾಖೆಯ ಉಗ್ರಾಣ ಮುಂದುವರಿಕೆಯೂ ವಿಳಂಬಕ್ಕೆ ಕಾರಣವಾಗಿತ್ತು.
ತಾಜ್‌ಮಹಲ್‌ನ ಪೂರ್ವಭಾಗದ ದ್ವಾರದಿಂದ ಒಂದು ಕಿಲೋಮೀಟರ್ ದೂರದಲ್ಲಿ ಡೇವಿಡ್ ಕ್ಲಿಪ್ಪರ್‌ಫೀಲ್ಡ್ ಹಾಗೂ ನೋಯ್ಡ್ ಮೂಲದ ಸ್ಟುಡಿಯೊ ಆಕ್ರೋಮ್‌ಗೆ ನಿರ್ಮಾಣದ ಹೊಣೆ ವಹಿಸಲಾಗಿದೆ.
ಸುಮಾರು 20 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. 2019ರ ಪೂರಕ ಬಜೆಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ಇದನ್ನು ಸದನದಲ್ಲಿ ಮಂಡಿಸಿತ್ತು.
ತಾಜ್ ಓರಿಯಂಟೇಶನ್ ಸೆಂಟರ್, ಆಗ್ರಾ ಹೆರಿಟೇಜ್ ಸೆಂಟರ್, ಆಗ್ರಾ ಸ್ಟ್ರೀಟ್ ಕೆಫೆ ಹಾಗೂ ಮೊಘಲ್ ಮ್ಯೂಸಿಯಂ ನಿರ್ಮಿಸುವ ಬೃಹತ್ ಯೋಜನೆಯ ಅಂಗವಾಗಿ ಇದನ್ನು ನಿರ್ಮಿಸಲು ಸಮಾಜವಾದಿ ಪಕ್ಷದ ಸರ್ಕಾರ 2016ರಲ್ಲಿ ನಿರ್ಧರಿಸಿತ್ತು.







