ಸಂಸತ್ತಿನಲ್ಲಿ ಕಂಗನಾಗೆ ತಿರುಗೇಟು ನೀಡಿದ ಜಯಾ ಬಚ್ಚನ್

ಜಯಾ ಬಚ್ಚನ್
ಹೊಸದಿಲ್ಲಿ: ಚಿತ್ರೋದ್ಯಮಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರ ಕುರಿತಂತೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ಸಂಸದೆ ಹಾಗೂ ಹಿರಿಯ ನಟಿ ಜಯಾ ಬಚ್ಚನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಮನರಂಜನಾ ಕ್ಷೇತ್ರದ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗುತ್ತಿದೆ. ಈ ಕ್ಷೇತ್ರದಿಂದ ಹೆಸರು ಗಳಿಸಿದವರು ಅದನ್ನು ಗಟಾರ ಎಂದಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಇಂತಹ ಭಾಷೆ ಬಳಸದಂತೆ ಸರಕಾರ ಇಂತಹ ಜನರಿಗೆ ಹೇಳಬೇಕು,'' ಎಂದು ಹೇಳುವ ಮೂಲಕ ಪರೋಕ್ಷವಾಗಿ ನಟಿ ಕಂಗನಾ ರಾಣಾವತ್ ಅವರನ್ನು ಟೀಕಿಸಿದ್ದಾರೆ. ಚಿತ್ರರಂಗವನ್ನು ಗಟಾರ ಎಂದು ಕರೆದಿದ್ದ ಕಂಗನಾ, ಅಲ್ಲಿ ಕೆಲಸ ಮಾಡುವ ಶೇ. 99ರಷ್ಟು ಮಂದಿ ಡ್ರಗ್ಸ್ ಬಳಸಿದ್ದಾರೆ ಎಂದು ಹೇಳಿದ್ದರು.
"ಕೆಲ ಜನರಿದ್ದಾರೆಂಬ ಮಾತ್ರಕ್ಕೆ ಇಡೀ ಚಿತ್ರೋದ್ಯಮವನ್ನು ದೂಷಿಸಲು ಸಾಧ್ಯವಿಲ್ಲ. ನಿನ್ನೆ ನಮ್ಮ ಲೋಕಸಭಾ ಸದಸ್ಯರು ಕೂಡ ಇದೇ ರೀತಿ ಮಾತನಾಡಿದ್ದಾರೆ. ಇದು ಅವಮಾನಕರ,'' ಎಂದು ಬಿಜೆಪಿ ಸಂಸದ ರವಿ ಕಿಶನ್ ಅವರು ಚಿತ್ರೋದ್ಯಮದ ಡ್ರಗ್ಸ್ ವ್ಯಸನ ಕುರಿತಂತೆ ನೀಡಿದ ಹೇಳಿಕೆಗೆ ಜಯಾ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.





