ಶಿವಸೇನೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ನಿವೃತ್ತ ನೌಕಾದಳ ಅಧಿಕಾರಿ ಬಿಜೆಪಿಗೆ ಸೇರ್ಪಡೆ

ಮದನ್ ಶರ್ಮ (Photo: twitter)
ಮುಂಬೈ: ಕಾರ್ಟೂನ್ ವಿಚಾರದಲ್ಲಿ ಶಿವಸೇನೆ ಸದಸ್ಯರಿಂದ ಹಲ್ಲೆಗೊಳಗಾಗಿದ್ದ ನಿವೃತ್ತ ನೌಕಾದಳ ಅಧಿಕಾರಿ ಮದನ್ ಶರ್ಮ ತಾವು ಬಿಜೆಪಿ, ಆರಸ್ಸೆಸ್ ಸೇರಿರುವುದಾಗಿ ಹೇಳಿದ್ದಾರಲ್ಲದೆ ಮಹಾರಾಷ್ಟ್ರದಲ್ಲಿನ 'ಗೂಂಡಾಗಿರಿ' ನಿಲ್ಲಿಸುವುದಾಗಿಯೂ ತಿಳಿಸಿದ್ದಾರೆ.
"ನಾನೀಗ ಬಿಜೆಪಿ ಮತ್ತು ಆರೆಸ್ಸೆಸ್ ಸೇರಿದ್ದೇನೆ. ಮಹಾರಾಷ್ಟ್ರದಲ್ಲಿ ಯಾವುದೇ ಗೂಂಡಾಗಿರಿ ನಡೆಯಲು ಬಿಡುವುದಿಲ್ಲ,'' ಎಂದು ಅವರು ಹೇಳಿದರು.
ಇಂದು ರಾಜ್ಯಪಾಲ ಬಿ ಎಸ್ ಕೊಶ್ಯಾರಿ ಅವರನ್ನು ಭೇಟಿಯಾದ ಶರ್ಮ ತಾವು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ವಿನಂತಿಸಿದ್ದಾಗಿ ಹೇಳಿದರಲ್ಲದೆ ಈ ಕುರಿತು ಕೇಂದ್ರದ ಬಳಿ ಮಾತನಾಡುವ ಭರವಸೆಯನ್ನು ರಾಜ್ಯಪಾಲರು ನೀಡಿದ್ದಾರೆಂದು ತಿಳಿಸಿದರು.
"ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ದುರ್ಬಲ ಸೆಕ್ಷನ್ಗಳನ್ವಯ ಪ್ರಕರಣ ದಾಖಲಿಸಲಾಗಿರುವ ಕುರಿತು ರಾಜ್ಯಪಾಲರಲ್ಲಿ ತಿಳಿಸಿದ್ದೇನೆ,'' ಎಂದೂ ಹೇಳಿದರು.
ಮುಖ್ಯಮಂತ್ರಿಯೊಬ್ಬರಿಗೆ ಹೇಗೆ ಗೌರವ ತೋರಿಸಬೇಕೆಂದು ಅವರಿಗೆ ಕಲಿಸಲಾಗಿಲ್ಲ ಎಂದು ಸೋಮವಾರ ಶಿವಸೇನೆ ಮದನ್ ಶರ್ಮ ವಿರುದ್ಧ ಕಿಡಿ ಕಾರಿತ್ತು. ``ಸಾಂವಿಧಾನಿಕ ಹುದ್ದೆ ಹೊಂದಿದ ವ್ಯಕ್ತಿಗೆ ಗೌರವ ಸೂಚಿಸಬೇಕೆಂದು ಮದನ್ ಶರ್ಮ ಅವರಿಗೆ ನೌಕಾದಳದಲ್ಲಿ ಕಲಿಸಲಾಗಿಲ್ಲವೇ?,'' ಎಂದು ಶಿವಸೇನೆ ಸಾಮ್ನಾದಲ್ಲಿ ಬರೆದಿತ್ತು.
ಸೀಎಂ ಉದ್ಧವ್ ಠಾಕ್ರೆ ಕುರಿತಾದ ಕಾರ್ಟೂನ್ ಒಂದನ್ನು ಫಾರ್ವರ್ಡ್ ಮಾಡಿದ್ದಕ್ಕೆ ಆಕ್ಷೇಪಿಸಿ ಮದನ್ ಶರ್ಮ ಮೇಲೆ ಹಲ್ಲೆಗೈದ ಆರು ಮಂದಿ ಶಿವಸೇನಾ ಕಾರ್ಯಕರ್ತರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.







