ಡ್ರಗ್ಸ್ ದಂಧೆಗೆ ಕಡಿವಾಣದ ಬಗ್ಗೆ ನಳಿನ್ ಕುಮಾರ್ ಸಂದೇಶಕ್ಕೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು, ಸೆ.15: ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಕಿರುವ ಸಂದೇಶಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಕಳೆದ 6 ವರ್ಷದಿಂದ ಆಡಳಿತದಲ್ಲಿರುವ ನರೇಂದ್ರ ಮೋದಿ ಆಡಳಿತವು ವಿದೇಶದಿಂದ ದೇಶದೊಳಗೆ ನುಸುಳುವ ಮಾದಕ ವಸ್ತುಗಳನ್ನ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟ್ವೀಟ್ ಮಾಡಿದೆ.
ಡ್ರಗ್ಸ್ ಪೆಡ್ಲರ್ ಗಳೊಂದಿಗಿನ ರಾಜ್ಯ ಬಿಜೆಪಿ ನಾಯಕರ ನಿಕಟ ಸಂಬಂಧ ಹೊರಬರುತ್ತಿದೆ. ವಿಪಕ್ಷಗಳತ್ತ ಬೆಟ್ಟು ತೋರಿ ನಿಮ್ಮ ಹಗರಣ ಮರೆಮಾಚುವ ತಂತ್ರ ನಡೆಯದು ಎಂದು ನಳಿನ್ ಕುಮಾರ್ ಗೆ ತಿರುಗೇಟು ನೀಡಿದೆ.
ನಳಿನ್ ಕುಮಾರ್ ಸಂದೇಶ: ಡ್ರಗ್ಸ್ ವಿರುದ್ಧ ಈ ಬಾರಿ ಮಾತ್ರವಲ್ಲದೆ ಹಿಂದಿನ ಸರಕಾರ ಇದ್ದಾಗಲೂ ಕೂಗು ಕೇಳಿ ಬರುತ್ತಿತ್ತು. ಆದರೆ, ಬಿಜೆಪಿ ಸರಕಾರ ಮಾತ್ರ ಈ ಬಗ್ಗೆ ಕಠಿಣವಾದ ನಿರ್ಧಾರ ತೆಗೆದುಕೊಂಡು ಈ ಮಾಫಿಯಾ ಮಟ್ಟಹಾಕಲು ಮುಂದಾಗಿದೆ. ಇದೇ ಕೆಲಸವನ್ನು ಹಿಂದಿನ ಸರಕಾರಗಳು ಮಾಡಿರುತ್ತಿದ್ದರೆ ಡ್ರಗ್ಸ್ ಮಾಫಿಯಾ ಬುಡಸಮೇತ ನಾಶ ಆಗಿರುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದರು.







