ನಿಷೇಧವಿದ್ದರೂ ಅವಧೂತರ ಆರಾಧನಾ ಕೇಂದ್ರಗಳಲ್ಲಿ 'ಪ್ರಸಾದ'ದ ರೂಪದಲ್ಲಿ ಗಾಂಜಾ ಬಳಕೆ ?

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ. 15: ರಾಜ್ಯದಲ್ಲಿ ಮಾದಕ ವಸ್ತುಗಳ(ಗಾಂಜಾ) ಜಾಲದಲ್ಲಿ ಚಿತ್ರ ನಟಿಯರು, ಕೆಲ ರಾಜಕೀಯ ಮುಖಂಡರ ಹೆಸರುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಸೂಫಿ, ಸಿದ್ಧ, ಅವಧೂತ ಪರಂಪರೆಯ ಕೆಲ ಸೌಹಾರ್ದ ತಾಣಗಳು, ಕೆಲ ದೇವಸ್ಥಾನಗಳ ಜಾತ್ರೆಗಳಲ್ಲಿ ಬೈರಾಗಿಗಳು, ಸಾಧು-ಸಂತರು ಸೇರಿದಂತೆ ಕೆಲಭಕ್ತರು 'ನಿಷೇಧ'ದ ನಡುವೆಯೂ ಗಾಂಜಾವನ್ನು 'ಪ್ರಸಾದ'ದ ರೂಪದಲ್ಲಿ ಬಳಕೆ ಮಾಡುವ ಪರಿಪಾಠ ಇಂದಿಗೂ ಚಾಲ್ತಿಯಲ್ಲಿದೆ.
ರಾಜ್ಯದ ಅತ್ಯಂತ ಪುರಾತನ ಮತ್ತು ಪ್ರಸಿದ್ಧವಾಗಿರುವ ಸೂಫಿ, ಅವಧೂತ, ನಾಥ, ಸಿದ್ಧರು ಸೇರಿದಂತೆ ಶರಣ ಚಳವಳಿಯ ಮುಂದುವರಿದ ಭಾಗವಾಗಿರುವ ಹಲವು ಶ್ರದ್ಧಾ ಕೇಂದ್ರಗಳು, ಆರಾಧನಾ ಸ್ಥಳಗಳಲ್ಲಿ ದೇವಸ್ಥಾನಗಳಲ್ಲಿ ಕೆಲ ಸಾಧಕರು ಭಂಗಿ ಸೊಪ್ಪು(ಗಾಂಜಾ)ನ್ನು ಬಳಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.
ಹಾವೇರಿ ಜಿಲ್ಲೆಯ 'ಮೈಲಾರ ಲಿಂಗನ ಕಾರ್ಣಿಕ'ಕ್ಕೆ ಬರುವ ಗೊರವಯ್ಯಗಳು, ಕೊಡೇಕಲ್ ಬಸವಣ್ಣ, ಬಳ್ಳಾರಿಯ ಸಿಳಗುರಿಕೆ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂತಿಣಿ ಮೌನೇಶ್ವರ ದೇವಳಕ್ಕೆ ಆಗಮಿಸುವ ಸಾಧುಗಳು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕಲ್ಲೂರು ಸಿದ್ದಪಾಜಿ-ಮಂಟೇಸ್ವಾಮಿ ಜಾತ್ರೆ, ಚಾಮರಾಜನಗರ ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರನ ಕೆಲ ಭಕ್ತಾಧಿಗಳು, ಅವಧೂತ ಪರಂಪರೆಯ ಸಿದ್ಧಾರೂಢ ಮಠದ ಸಾಧು-ಸಂತರು, ಚಿತ್ರದುರ್ಗ ಜಿಲ್ಲೆ ಕೊಳಾಳು ಗ್ರಾಮದಲ್ಲಿರುವ ಕೆಂಚಾವಧೂತನ ಆರಾಧಕರು, ಅದೇ ಜಿಲ್ಲೆ ಚಳ್ಳಕೆರೆ ತಾಲೂಕಿನ ಪವಾಡ ಪುರುಷನೆಂಬ ನಂಬಿಕೆಯುಳ್ಳ ತಿಪ್ಪೇರುದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದುಕೊಳ್ಳುವ ಕೆಲ ಜಂಗಮರು-ಸಾಧುಗಳ ಗಾಂಜಾ ಸೇವನೆ ಗುಟ್ಟಿನ ಸಂಗತಿಯೇನಲ್ಲ. ಆದರೆ, ಈ ಸಾಧು, ಸಂತರು, ಭಕ್ತರು ಹಾಗೂ ಭೈರಾಗಿಗಳಿಗೆ 'ಗಾಂಜಾ' ಎಲ್ಲಿಂದ ಬರುತ್ತದೆ ಎಂಬುದು ನಿಗೂಢವಾಗಿದೆ.
ಕೆಲವು ಕಡೆಗಳು ಈ ಸಾಧು-ಸಂತರು ಕಾಡು-ಮೇಡುಗಳಲ್ಲಿ ಗಾಂಜಾದ ಬೀಜಗಳನ್ನು ಎಸೆದು ಬೆಳೆದ ಗಾಂಜಾ ಗಿಡಗಳನ್ನು ತಮಗೆ ಬೇಕಾದಾಗ ಕಿತ್ತುತಂದು ಅದರ ಸೊಪ್ಪನ್ನು ಬಳಕೆ ಮಾಡುತ್ತಾರೆಂದು ಹೇಳಲಾಗುತ್ತದೆ. ಮೈಲಾರ ಲಿಂಗನ ಭಕ್ತರು `ದೇವರಿಗೆ ಅರ್ಪಿಸಲು ಒಂದೆರಡು ಗಾಂಜಾ ಗಿಡಗಳನ್ನು ಬೆಳೆದರೆ ತಪ್ಪೇನಿಲ್ಲ' ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಆಧ್ಯಾತ್ಮಿಕ ಚಿಂತಕರು, ಕೆಲ ಸಾಧಕರು, ಪವಾಡ ಪುರುಷರು, ಅವಧೂತ ಪರಂಪರೆಯ ಭೈರಾಗಿಗಳು, ಗೊರವಯ್ಯಗಳು ಸೇರಿದಂತೆ ಹಲವರು ಧ್ಯಾನ, ಭಜನೆ, ಆರಾಧನೆ ಮತ್ತು ತಮ್ಮ ಧಣಿವು-ಆಯಾಸ ನಿವಾರಣೆಗಾಗಿ ಗಾಂಜಾ ಸೇವನೆ ಮಾಡುತ್ತಿದ್ದರು ಎಂಬುದು ಚಿಂತಕರ ಅಭಿಮತ. ರಾಜ್ಯದ ಹಲವು ಶ್ರದ್ಧಾ ಕೇಂದ್ರಗಳು, ದೇವಸ್ಥಾನಗಳ ಜಾತ್ರೆ, ಉತ್ಸವಗಳಿಗೆ ಆಗಮಿಸುವ ಸಾಧು-ಸಂತರು ಗಾಂಜಾವನ್ನು ತಂದು 'ಚಿಲುಮೆ'(ಭಂಗಿ ಸೇದುವ ಸಾಧನ)ಗೆ ಭಂಗಿ ಸೊಪ್ಪು ತುಂಬಿ ದೇವರ ಹೆಸರಿನಲ್ಲಿ ಎಲ್ಲರಿಗೂ ಹಂಚಿ ಸೇವಿಸುವ ಪರಿಪಾಠ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂತಿಣಿ ಮೌನೇಶ್ವರ ದೇವಸ್ಥಾನ ಮೂಲ ಸೂಫಿ ಪರಂಪರೆಯ ಸೌಹಾರ್ದ ಕೇಂದ್ರ. ಇಲ್ಲಿನ ಭೀಮಾನದಿ ದಡದಲ್ಲಿರುವ 'ಕೈಲಾಸಕಟ್ಟೆ'ಯಲ್ಲಿ ಕುಂಬಾರಿಕೆ ಕಾಯಕದಲ್ಲಿ ತೊಡಗುವ ತಿಂತಿಣಿ ಮೌನೇಶ್ವರ ತನ್ನ ಆಯಾಸ ನಿವಾರಣೆಗಾಗಿ 'ಚಿಲುಮೆ' ಹಚ್ಚಿ ಭಂಗಿ ಸೇದುತ್ತಿದ್ದರು ಎಂಬ ಪ್ರತೀತಿ ಇದೆ. ಅದು ಇಂದು ನಂಬಿಕೆಯಾಗಿದ್ದು, `ಇಲ್ಲಿಗೆ ಬರುವ ಸಾಧುಗಳು ಇಂದಿಗೂ ಗಾಂಜಾವನ್ನು ತಮ್ಮ ತಮ್ಮ ಹಂಚಿಕೆ ಮಾಡಿ ಸೇವನೆ ಮಾಡುತ್ತಾರೆ. ಆದರೆ, ಅದನ್ನು ಎಲ್ಲಿಂದ ತರುತ್ತಾರೆಂದು ನಮಗೆ ಗೊತ್ತಿಲ್ಲ' ಎಂಬುದು ಗ್ರಾಮಸ್ಥರ ಅನಿಸಿಕೆ.
ರಾಜ್ಯದಲ್ಲಿ ಸೂಫಿ, ಅವಧೂತ, ನಾಥ, ಸಿದ್ಧ, ತತ್ವಪದಕಾರರು ಸೇರಿದಂತೆ ಚಿಂತಕರು 'ಸಾಧನೆ'ಗಾಗಿ, ಲೌಕಿಕ ಜಗತ್ತಿನ ಜಂಜಾಟಗಳನ್ನು ಮರೆತು ಹೊಸ ಆಧ್ಯಾತ್ಮಿಕ ಅನುಸಂಧಾನಕ್ಕಾಗಿ ಕೆಲವರು ಗಾಂಜಾ ಬಳಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಅವರ್ಯಾರು 'ಚಟ'ಗಾರರಲ್ಲ, ಹಠಸಾಧಕರು. ತನ್ನ ತನವನ್ನು ಮೀರಿ ಮತ್ತೊಂದು ಹಂತಕ್ಕೆ ಹೋಗುವುದಕ್ಕೆ ತನ್ನ ತನವನ್ನು ಕಳೆದುಕೊಳ್ಳಲು `ಭಂಗಿ' ಸೇದುತ್ತಿದ್ದರಂತೆ. ಆದರೆ, ಕೆಲ ಶ್ರೀಮಂತರು ಚಟಕ್ಕಾಗಿ, ಮೋಜು, ಮಸ್ತಿಗಾಗಿ ಗಾಂಜಾ ಸೇವನೆ ಮಾಡುತ್ತಿದ್ದಾರೆ. 'ಅನುಭಾವಿ'ಗಳು ಹಣ, ಆಸ್ತಿ, ಅಂತಸ್ತು ಜಾತಿ, ಧರ್ಮವನ್ನು ಮೀರಿದವರು. ಇತ್ತೀಚಿನ ದಿನಗಳಲ್ಲಿ ಸೌಹಾರ್ದದ ಶ್ರದ್ಧಾ ಕೇಂದ್ರಗಳು ಹಲವು ಕಾರಣಗಳ ಸ್ವರೂಪ ಬದಲಾಗುತ್ತಿವೆ
-ಡಾ.ಕರಿಯಪ್ಪ ಮಾಳಿಗೆ, ಪ್ರಾಧ್ಯಾಪಕರು, ಚಿತ್ರದುರ್ಗ







