ಚಿತ್ರರಂಗದಲ್ಲಿ ಹಿಂದೆ ಇದ್ದ ಸಂಸ್ಕೃತಿ ಈಗ ಕಾಣುತ್ತಿಲ್ಲ: ಸಚಿವ ಬಿ.ಸಿ.ಪಾಟೀಲ್

ಕಲಬುರಗಿ, ಸೆ. 16: ಮುಖ್ಯಮಂತ್ರಿ ಯಡಿಯೂರಪ್ಪನವರು ಯಾರನ್ನೂ ಕೈಬಿಟ್ಟಿಲ್ಲ. ಹದಿನೇಳು ಜನರಿಗೆ ನ್ಯಾಯ ಒದಗಿಸಿದ್ದು, ಮುಂದಿನ ದಿನಗಳಲ್ಲಿಯೂ ಒದಗಿಸಲಿದ್ದಾರೆ. ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್ ಅವರಿಗೂ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿತ್ರರಂಗ ಮೊದಲು ಈ ರೀತಿಯಾಗಿ ಇರಲಿಲ್ಲ. ಆದರೆ ಇತ್ತೀಚೆಗೆ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗುವ ಮೂಲಕ ತಮ್ಮ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಸಹ ಹಾಳು ಮಾಡುತ್ತಿದ್ದಾರೆ. ಡ್ರಗ್ ವ್ಯಸನಿ ಕಲಾವಿದರನ್ನು ಅನುಕರಿಸಿದರೆ ದೇಶಕ್ಕೆ ಮಾರಕ ಎಂದು ಹೇಳಿದರು.
ಮಾದಕ ದ್ರವ್ಯ (ಡ್ರಗ್ಸ್) ವ್ಯಸನ ಚಿತ್ರರಂಗಕ್ಕೆ ಪೂರಕವಲ್ಲ. ಚಿತ್ರರಂಗದಲ್ಲೀಗ ನಮಸ್ಕಾರ ಸಂಸ್ಕೃತಿ ಬಿಟ್ಟುಹೋಗಿ ಹಾಯ್, ಬಾಯ್ ಸಂಸ್ಕೃತಿ ಬಂದಿದೆ. ಆದರೆ, ತಮ್ಮ ಅವಧಿಯಲ್ಲಿ ಕ್ಯಾಮೆರಾಮೆನ್‍ಗಳಿಗೂ ನಮಸ್ಕಾರ ಮಾಡುತ್ತಿದ್ದೆವು. ಹಿಂದಿನಂತಹ ಸಂಸ್ಕೃತಿ ಈಗ ಚಿತ್ರರಂಗದಲ್ಲಿ ಕಾಣುತ್ತಿಲ್ಲ. ಎಂದಿಗೂ ನಮ್ಮ ಸಂಸ್ಕೃತಿ ಪಾವಿತ್ರ್ಯತೆಯನ್ನು ಕೈಬಿಡಬಾರದು ಎಂದು ಅವರು ಸಲಹೆ ಮಾಡಿದರು.
ಕ್ಯಾಸಿನೋಗೆ ಹೊರ ದೇಶದಲ್ಲಿ ಅನುಮತಿ ನೀಡಲಾಗಿದೆ. ಗೋವಾ ರಾಜ್ಯದಲ್ಲಿಯೂ ಇದೆ. ಕ್ಯಾಸಿನೋಗೆ ಹೋದ ಮಾತ್ರಕ್ಕೆ ಡ್ರಗ್ಸ್ ಸೇವಿಸುತ್ತಾರೆ ಎಂದರ್ಥವಲ್ಲ. ಶಾಸಕ ಝಮೀರ್ ಅಹ್ಮದ್ ಖಾನ್ ಅವರು ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದಾರೆಯೋ? ಇಲ್ಲವೋ? ಎಂಬುದು ತನಿಖೆಯಿಂದ ತಿಳಿಯಲಿದೆ. ಝಮೀರ್ ಅಹ್ಮದ್ ಆಗಾಗ ಪ್ರಚಾರಕ್ಕಾಗಿ ಹೇಳಿಕೆಗಳನ್ನು ಕೊಡುವುದು ಸಹಜ. ಮೊದಲು ಯಡಿಯೂರಪ್ಪ ಮನೆಗೆ ಕಾವಲುಗಾರನಾಗುತ್ತೇನೆ ಎಂದಿದ್ದರು. ಇದೀಗ ಆರೋಪ ಸಾಬೀತಾದರೆ ತಮ್ಮ ಆಸ್ತಿಯನ್ನು ಸರಕಾರಕ್ಕೆ ಬರೆದುಕೊಡುವುದಾಗಿ ಹೇಳಿದ್ದಾರಷ್ಟೇ ಎಂದು ಪಾಟೀಲ್ ತಿರುಗೇಟು ನೀಡಿದರು.