ಭಾರೀ ಮಳೆ ಸಾಧ್ಯತೆ: ಕರಾವಳಿ ಜಿಲ್ಲೆಗಳಲ್ಲಿ ಸೆ.18ರಿಂದ ಆರೆಂಜ್ ಅಲರ್ಟ್
ಬೆಂಗಳೂರು, ಸೆ.16: ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಸೆ.16ರಿಂದ 20ರವರೆಗೆ ವ್ಯಾಪಕ ಮಳೆಯಾಗಲಿದ್ದು, 16 ಮತ್ತು 17ರಂದು ಯೆಲ್ಲೋ ಅಲರ್ಟ್, 18ರಿಂದ 20ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಒಳನಾಡಿನಲ್ಲಿ ಸೆ.16ರಿಂದ 20ರವರೆಗೆ ವ್ಯಾಪಕ ಮಳೆಯಾಗಲಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ ಸೆ.16ರಿಂದ 20ರವರೆಗೆ ವ್ಯಾಪಕ ಮಳೆಯಾಗಲಿದ್ದು, ಸೆ.18ರಂದು ಯೆಲ್ಲೋ ಅಲರ್ಟ್ ಹಾಗೂ ಸೆ.19 ಮತ್ತು 20ರಂದು ಆರೆಂಜ್ ಅಲರ್ಟ್ ಘೊಷಿಸಲಾಗಿದೆ.
ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಭಾರೀ ಹಾಗೂ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಸೆ.16 ಮತ್ತು 17ರಂದು ಹಗುರ ಮಳೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.