ಕುಂದಾಪುರ, ಕಾರ್ಕಳ ತಾಲೂಕು ಆಸ್ಪತ್ರೆಗಳಿಗೆ ತಲಾ 3 ವೆಂಟಿಲೇಟರ್
ಉಡುಪಿ, ಸೆ.16: ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿರುವ ಸರಕಾರಿ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ ತಲಾ ಮೂರು ವೆಂಟಿಲೇಟರ್‌ಗಳನ್ನು ಒದಗಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ರಾಜ್ಯದ ಒಟ್ಟು 146 ತಾಲೂಕು ಆಸ್ಪತ್ರೆಗಳಿಗೆ ಒಟ್ಟು 438 ವೆಂಟಿಲೇಟರ್ ಗಳನ್ನು ಸರಕಾರ ಒದಗಿಸಿದೆ. ಅದರಂತೆ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗಳಿಗೆ ತಲಾ ಮೂರು ವೆಂಟಿಲೇಟರ್‌ಗಳು ಮಂಜೂರಾಗಿವೆ.
ಜಿಲ್ಲೆಯಲ್ಲಿ ಈಗ ಲಭ್ಯವಿರುವ ಆರೋಗ್ಯ ರಕ್ಷಾ ಸಮಿತಿ ಅಥವಾ ಎನ್‌ಎಫ್‌ಡಿಎಸ್‌ನ ನಿಧಿಯನ್ನು ಬಳಸಿ ತಕ್ಷಣ ಇವುಗಳನ್ನು ಆಸ್ಪತ್ರೆಗಳಲ್ಲಿ ಅಳವಡಿಸಿ, ಕೋವಿಡ್ ರೋಗಿಗಳ ನಿರ್ವಹಣೆಗೆ ಉಪಯೋಗಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಆದೇಶದಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 11 ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ 8 ವೆಂಟಿಲೇಟರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಉಡುಪಿಯೊಂದಿಗೆ ದಕ್ಷಿಣ ಕನ್ನಡದ ನಾಲ್ಕು ತಾಲೂಕು ಆಸ್ಪತ್ರೆಗಳಿಗೆ 12, ಉತ್ತರ ಕನ್ನಡದ 10 ತಾಲೂಕು ಆಸ್ಪತ್ರೆ ಗಳಿಗೆ 30 ಹಾಗೂ ಶಿವಮೊಗ್ಗದ ಆರು ಆಸ್ಪತ್ರೆಗಳಿಗೆ 18 ವೆಂಟಿಲೇಟರ್‌ಗಳು ಮಂಜೂರಾಗಿವೆ.







