ಶಾಲಾ ಕಾಲೇಜು ಆವರಣಗಳಲ್ಲಿ ತಂಬಾಕು ಮಾರಾಟ ಮಾಡಿದರೆ ಕಠಿಣ ಕ್ರಮ: ಮನಪಾ ಉಪಾಯುಕ್ತ

ಮಂಗಳೂರು, ಸೆ.16 : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಶಾಲಾ ಕಾಲೇಜು ಆವರಣಗಳಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ. ಮಾರಾಟ ಮಾಡುವ ಪ್ರಕರಣ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾ ನಗರಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಹೇಳಿದರು.
‘ಕೋಟ್ಪಾ-2003 ಕಾಯ್ದೆಯ ಅನುಷ್ಠಾನ ಮತ್ತು ತಂಬಾಕು ಮಾರಾಟಗಾರಿಗೆ ಪ್ರತ್ಯೇಕ ವ್ಯಾಪಾರ ಪರವಾನಗಿ ಅವಕಾಶ ಮತ್ತು ಪ್ರಯೋಜನ ಗಳು’ ಎಂಬ ವಿಷಯದ ಕುರಿತು ಮನಪಾ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈಗಾಗಲೇ ಪಾಲಿಕೆ ವ್ಯಾಪ್ತಿಯ ಪ್ರತೀ ವಾರ್ಡ್‌ನಲ್ಲಿ ತಂಬಾಕು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಶಾಲಾ ಕಾಲೇಜಗಳಿಂದ 100 ಮೀ. ಅಂತರದಲ್ಲಿ ತಂಬಾಕು, ಗುಟ್ಕಾ ಮಾರಾಟ ಮಾಡುವುದು ಹಾಗೂ ಸೇವನೆ ಮಾಡುವುದನ್ನು ನಿಷೇಧಿಸಲಾಗಿದೆ, ತಪ್ಪಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಂಡು ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದರು.
ದೆಹಲಿಯ ತಂಬಾಕು ನಿಯಂತ್ರಣದ ಹಿರಿಯ ತಾಂತ್ರಿಕ ಸಲಹೆಗಾರ ಡಾ. ಶ್ರೀನಿಧಿ ಮಾತನಾಡಿ, ಮಹಾನಗರ ಪಾಲಿಕೆಗಳು ವ್ಯಾಪಾರದ ಪರವಾನಗಿ ನೀಡುವಾಗ ಕೋಟ್ಪಾಕಾಯ್ದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಸಭೆಯಲ್ಲಿ ಮನಪಾ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಾಧಿಕಾರಿ ಡಾ. ಜಗದೀಶ್, ಪರಿಸರ ಅಭಿಯಂತರ ಮಧು ಎಸ್.ಎಂ. ಮತ್ತಿತರರು ಉಪಸ್ಥಿತರಿದ್ದರು.







