'ವಿ4 ಸ್ಟ್ರೀಮ್'ನಲ್ಲಿ ಮೂಡಿಬರುತ್ತಿದೆ ಕನ್ನಡದ ಪ್ರಥಮ ವೆಬ್‌ಸಿರೀಸ್ 'ಸೈಕೋ'

ಇತ್ತೀಚಿನ ದಿನಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಹೊಸ ರೂಪಗಳಲ್ಲಿ ಮನರಂಜನೆಯು ನಮ್ಮ ಕಣ್ಣೆದುರಿಗೆ ಬಂದು ತಲುಪುತ್ತಿದೆ. ಇಂತಹ ಒಂದು ಬದಲಾವಣೆಗಳ ಪೈಕಿ ಇತ್ತೀಚಿನ ಅತ್ಯಂತ ಜನಪ್ರಿಯ ಕೆಟಗರಿ ಎಂದರೆ ಅದು ವೆಬ್ ಸಿರೀಸ್‌ಗಳು.
ಈಗಾಗಲೇ ಅನೇಕ ವೆಬ್‌ಸಿರೀಸ್‌ಗಳು ಅನೇಕ ಭಾಷೆಗಳಲ್ಲಿ ತಯಾರಾಗಿ ವೀಕ್ಷಕರ ಮನಗೆದ್ದಿವೆ. ಕಥೆಯನ್ನು ಜಾಸ್ತಿ ಎಳೆಯದೆ, ವೀಕ್ಷಕರಿಗೆ ಬೋರ್ ಹೊಡೆಯದಂತೆ ಸೂಕ್ಷ್ಮವಾಗಿ, ರಸವತ್ತಾಗಿ ಕತೆಯನ್ನು ಹೇಳುವ ವೆಬ್‌ಸಿರೀಸ್‌ಗಳು ಯುವಜನತೆಯ ನೆಚ್ಚಿನ ಕಂಟೆಂಟ್ ಆಗಿದೆ. ಇದೀಗ ಕನ್ನಡ ಭಾಷೆಯಲ್ಲೂ ಒಂದು ವೆಬ್‌ಸಿರೀಸ್ ಸದ್ದಿಲ್ಲದಂತೆ ತಯಾರಾಗಿದೆ. ಕನ್ನಡದ ಪ್ರಥಮ ವೆಬ್ ಸಿರೀಸ್ ಎನ್ನುವ ಹೆಗ್ಗಳಿಕೆ ಪಡೆದು ಕೊಂಡಿರುವ, ಒಂದು ಥ್ರಿಲ್ಲರ್ ವೆಬ್‌ಸಿರೀಸ್ 'ಸೈಕೋ' ಕರ್ನಾಟಕದ ಪ್ರಪ್ರಥಮ ಒಟಿಟಿ 'ವಿ4 ಸ್ಟ್ರೀಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಲಕ್ಷಕ್ಕೂ ಅಧಿಕ ವ್ಯೂಸ್‌ಗಳನ್ನು ಪಡೆದುಕೊಂಡ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ.
ರವಿ ಶಾಮನೂರು ಫಿಲ್ಮ್ಸ್ ಬ್ಯಾನರ್‌ನಡಿ, ಸೋಚ್ ಸಿನೆಮಾಸ್ ಸಹಯೋಗದಲ್ಲಿ ಡಾ. ರವಿ ಶಾಮನೂರು ಈ ವೆಬ್‌ಸಿರೀಸ್‌ನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ರಾಮ್‌ತೇಜ ಅವರ ಕಥೆ ಮತ್ತು ನಿರ್ದೇಶನದ ವೆಬ್‌ಸಿರೀಸ್ ಇದಾಗಿದ್ದು, ಬಹುಭಾಷಾ ನಟಿ, ಕುಡ್ಲದ ಕುವರಿ ಸೋನಲ್ ಮೊಂತೆರೋ ಈ ವೆಬ್ ಸಿರೀಸ್‌ನಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ವರ್ಕ್ ಮಾಡಿದ್ದಾರೆ. ಇನ್ನು ಪ್ರೊಡಕ್ಷನ್ ಡಿಸೈನ್ ಕೆಲಸವನ್ನು ಚರಣ್ ಸುವರ್ಣ ನಿರ್ವಹಿಸಿದ್ದಾರೆ. ಕಿಶೋರ್ ಅವರ ಸಂಗೀತ ಇದಕ್ಕಿದ್ದು, ಮುಖ್ಯಭೂಮಿಕೆಯಲ್ಲಿ ಈಗಾಗಲೇ ಸಿನೆಮಾ, ಸೀರಿಯಲ್‌ಗಳಲ್ಲಿ ನಟಿಸಿ ಮನೆ ಮಾತಾಗಿರುವ ನಟ ಅಮಿತ್ ರಾವ್, ಮಂಜು ದೈವಜ್ಞ, ಶ್ರೇಯಾ ಶೆಟ್ಟಿ, ಜೋಸಿಟಾ, ಕ್ರಿಸ್ಟಿನಾ, ಜಾಹ್ನವಿ, ನೇಹಾ, ಕೇಶವ, ಸಂಕೇತ್ ಮತ್ತು ನಮ್ರತಾ ನಟಿಸಿದ್ದಾರೆ.
ಕವಿತಾ ಭಂಡಾರಿ ಅವರು ಸಂಕಲನ ನಿರ್ವಹಿಸಿದ್ದು, ಲಕ್ಷ್ನೀ ಶ್ರೀನಿವಾಸ್ ಅವರ ಡ್ರೋಣ್, ರವಿ ಅವರ ಛಾಯಾಗ್ರಹಣ ಈ ಸಿರೀಸ್‌ಗಿದೆ. ಸಹನಿರ್ದೇಶಕರಾಗಿ ಉದಯ ರಂಗನಾಥ, ಅಸೋಸಿಯೇಟ್ ಡೈರೆಕ್ಟರ್ ಆಗಿ ಪೃಥ್ವಿ ಶಾಮನೂರು, ಶಂಕರ್ ಗೌಡ ಸಹಕರಿಸಿದ್ದಾರೆ. ಅಸಿಸ್ಟೆಂಟ್‌ಡೈರೆಕ್ಟರ್ ಆಗಿ ಕ್ಷಿತಿ ಸುವರ್ಣ ಸಹಕರಿಸಿದ್ದಾರೆ. ಇನ್ನು ಈ ವೆಬ್‌ಸಿರೀಸ್ ಮೇಕಪ್‌ನಲ್ಲಿ ಸಾಕಷ್ಟು ಕೌಶಲ್ಯವನ್ನು ಬಯಸಿದ್ದು, ಸಂಜಯ್ ಅವರು ಅದ್ಭುತವಾಗಿ ಮೇಕಪ್‌ನ ಜವಾಬ್ದಾರಿ ನಿಭಾಯಿಸಿದ್ದಾರೆ. ಪ್ರೊಡಕ್ಷನ್ ಟೀಮ್‌ನಲ್ಲಿ ಶ್ರೀನಿವಾಸ್ ಸಿವಿ ಗೌಡ, ಭರತ್, ಸಂಪತ್ ರೆಡ್ಡಿ ಕೆಲಸ ಮಾಡಿದ್ದು, ದಯಾನಂದ್ ಅವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆತಿಥ್ಯದ ಜವಾಬ್ದಾರಿಯನ್ನು ಹೇಮಾವತಿ ಸುವರ್ಣ ನಿಭಾಯಿಸಿದ್ದಾರೆ. ಈ ಮೂಲಕ ಒಂದು ಅದ್ಭುತವಾದ ಕನ್ನಡ ವೆಬ್‌ಸಿರೀಸ್ ತಯಾರಾಗಿದೆ.







