ಯುರೋಪ್‌ನಲ್ಲಿ ಕೊರೋನದ ಎರಡನೆ ಅಲೆಯ ಭೀತಿ
ಬ್ರಿಟನ್, ಸ್ಪೇನ್, ಫ್ರಾನ್ಸ್‌ನಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ಉಲ್ಬಣ

ಸೆ.19: ಬ್ರಿಟನ್, ಫ್ರಾನ್ಸ್ , ಸ್ಪೇನ್ ಸೇರಿದಂತೆ ಯುರೋಪ್ ದೇಶಗಳಲ್ಲಿ ಕೆಲವು ತಿಂಗಳುಗಳಿಂದ ಇಳಿಮುಖವಾಗಿದ್ದ ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಒಂದು ವಾರದಿಂದ ದಿಢೀರ್ ಏರಿಕೆ ಕಂಡುಬಂದಿದ್ದು, ಈ ಭೀಕರ ಸೋಂಕಿನ ಎರಡನೆ ಅಲೆ ಆರಂಭಗೊಂಡಿರುವ ಭೀತಿಯುಂಟಾಗಿದೆ.
ಬ್ರಿಟನ್‌ನಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಎರಡನೆ ಅಲೆ ಆರಂಭಗೊಂಡಿರುವ ಭೀತಿಯ ನಡುವೆಯೇ ರಾಜಧಾನಿ ಲಂಡನ್‌ನಲ್ಲಿ ಮತ್ತೆ ಲಾಕ್‌ಡೌನ್ ಹೇರುವ ಸಾಧ್ಯತೆಗಳು ದಟ್ಟವಾಗಿ ಕಂಡುಬರುತ್ತಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಲಂಡನ್ ನಗರಾದ್ಯಂತ ಕೊರೋನ ವೈರಸ್ ತ್ವರಿತ ವೇಗದಲ್ಲಿ ಹರಡುತ್ತಿರುವ ಆತಂಕವುಂಟಾಗಿದ್ದು, ಸೋಂಕಿನ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಮೇಯರ್ ಸಾದಿಕ್ ಖಾನ್ ತಿಳಿಸಿದ್ದಾರೆ. ಅವರು ಇಂದು ಸ್ಥಳೀಯಾಡಳಿತ ಮಂಡಳಿಗಳ ಮುಖ್ಯಸ್ಥರು ಹಾಗೂ ಸರಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕೊರೋನ ವೈರಸ್‌ನ ಹರಡುವಿಕೆಯನ್ನು ನಿಧಾನಗೊಳಿಸಲು ಲಂಡನ್‌ನಲ್ಲಿ ಶೀಘ್ರವೇ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ಖಾನ್ ತಿಳಿಸಿದ್ದಾರೆ. ಪ್ರತಿವರ್ಷವೂ 1 ಲಕ್ಷಕ್ಕೂ ಅಧಿಕ ಜನರನ್ನು ಆಕರ್ಷಿಸುವ ಥೇಮ್ಸ್ ನದಿಯ ದಂಡೆಗಳಲ್ಲಿ ನಡೆಯುವ ಹೊಸ ವರ್ಷಾಚರಣೆಯನ್ನು ಈ ಬಾರಿ ನಡೆಸಲಾಗು ವುದಿಲ್ಲವೆಂದು ಸಾದಿಕ್ ತಿಳಿಸಿದ್ದಾರೆ. ಕಳೆದ ಏಳು ದಿನಗಳಲ್ಲಿ ಲಂಡನ್‌ನಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯು 18.8ರಿಂದ 25ಕ್ಕೆ ಏರಿಕೆಯಾಗಿದೆ ಎಂದವರು ಹೇಳಿದರು.
ಈ ಮಧ್ಯೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡಾ ದೇಶವು ಕೊರೋನ ವೈರಸ್‌ನ ಎರಡನೆ ಆಲೆಯನ್ನು ಕಾಣಲಿದೆಯೆಂಬ ಭೀತಿಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಲು ಮತ್ತೆ ಲಾಕ್‌ಡೌನ್ ಹೇರುವ ಸುಳಿವು ನೀಡಿದ್ದಾರೆ.
ಶುಕ್ರವಾರದಂದು ಬ್ರಿಟನ್‌ನಲ್ಲಿ 4322 ಕೊರೋನ ಸೋಂಕಿ ಪ್ರಕರಣಗಳು ವರದಿಯಾಗಿದ್ದವು. ಮೇ ತಿಂಗಳಿನಿಂದೀಚೆಗೆ ಬ್ರಿಟನ್‌ನಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 4 ಸಾವಿರದ ಗಡಿಯನ್ನು ದಾಟಿರುವುದು ಇದೇ ಮೊದಲ ಸಲವಾಗಿದೆ.