ರಾಜಧಾನಿಯಲ್ಲಿ ಧಾರಾಕಾರ ಮಳೆ: ಇನ್ನು ಮೂರು ದಿನ ಸಾಧಾರಣ ಮಳೆ ಸಾಧ್ಯತೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ. 20: ನಗರದ ವಿವಿಧೆಡೆ ರವಿವಾರದಂದು ಧಾರಾಕಾರ ಮಳೆಯಾಗಿದ್ದು, ಚೊಕ್ಕಸಂದ್ರದಲ್ಲಿ ಅತಿಹೆಚ್ಚು (12 ಮಿ.ಮೀ) ಮಳೆಯಾಗಿದೆ. ನಗರದಲ್ಲಿ ಮುಂದಿನ ಮೂರು ದಿನ ಸಾಧಾರಣ ಮಳೆಯಾಗಲಿದ್ದು, ಮೋಡ ಕವಿದ ವಾತಾವರಣ ಇರಲಿದೆ. ಅಗಾಗ್ಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈವರೆಗೆ ಯಾವುದೇ ಅಲರ್ಟ್ ಘೋಷಣೆ ಮಾಡಿಲ್ಲ. ಧಾರಾಕಾರ ಮಳೆಯಿಂದ ನಗರದ ಹಲವು ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿದಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ನಗರದ ಜನತೆ ಮನೆಬಿಟ್ಟು ಆಚೆಗೆ ಬರಲಿಲ್ಲ. ನಗರದ ಸುರಿದ ಭಾರಿ ಮಳೆಗೆ ಹನುಮಂತ ನಗರ, ಗಂಗಾನಗರ, ಆರ್.ಟಿ ನಗರ ಹಾಗೂ
ಶಿವಾನಂದ ವೃತ್ತದ ಬಳಿ, ಡಿಜಿ ಹಳ್ಳಿ ವ್ಯಾಪ್ತಿಯ ಅಂಬೇಡ್ಕರ್ ನಗರದ 2ನೇ ಹಂತದಲ್ಲಿ ತಲಾ ಒಂದೊಂದು ಮರ ಬಿದ್ದಿವೆ. ನಗರ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ?: ದಾಸನಪುರ- 9.5 ಮಿ.ಮಿ, ಆರೂರು- 8.5 ಮಿ.ಮೀ, ಹುಸ್ಕೂರು- 8 ಮಿ.ಮೀ, ಮಾದನಾಯಕನಹಳ್ಳಿ 8 ಮಿ.ಮೀ, ಮಾದಾವರ- 9 ಮಿ.ಮೀ, ಅಡಕಮಾರನಹಳ್ಳಿ- 9.5 ಮಿ.ಮೀ, ಕಂಚೋವಳ್ಳಿ 11 ಮಿ.ಮೀ, ಸಿದ್ದುವಿನ ಹೊಸಳ್ಳಿ 11 ಮಿ.ಮೀ, ಚಿಕ್ಕಬಿದರೆ ಕಲ್ಲು- 8.5 ಮಿ.ಮೀ, ಶ್ರೀಕಂಠಪುರ- 8.5 ಮಿ.ಮೀ, ಕೆ.ಎಸ್.ಎನ್.ಡಿ.ಎಂ.ಸಿ ಕ್ಯಾಂಪಸ್- 8 ಮಿ.ಮೀ, ದೊಡ್ಡಬೊಮ್ಮಸಂದ್ರ- 5.5 ಮಿ.ಮೀ, ಯಶವಂತಪುರ- 8.5 ಮಿ.ಮೀ, ಬಸವೇಶ್ವರ ನಗರ- 13 ಮಿ.ಮೀ, ಪೀಣ್ಯ ಇಂಡಸ್ಟ್ರೀಯಲ್ ಏರಿಯಾ- 10 ಮಿ.ಮೀ, ಚಿಕ್ಕಬಾಣಾವರ- 8 ಮಿ.ಮೀ, ಕೊಡಿಗೆಹಳ್ಳಿ- 9 ಮಿ.ಮೀ, ಗಾಳಿ ಆಂಜನೇಯ ದೇವಸ್ಥಾನ-11 ಮಿ.ಮೀ, ಸೋಮಶೆಟ್ಟಿಹಳ್ಳಿ- 11.5 ಮಿ.ಮೀ, ಮಾರುತಿ ಮಂದಿರ- 11 ಮಿ.ಮೀ, ಮೇಲನಕುಂಟೆ 10 ಮಿ.ಮೀ, ಶೆಟ್ಟಿ ಹಳ್ಳಿ-11.5 ಮಿ.ಮೀ, ದಯಾನಂದ ನಗರ- 11 ಮಿ.ಮೀ, ನಾಗಾಪುರ- 12.5 ಮಿ.ಮೀ, ರಾಜ್ ಮಹಲ್-13 ಮಿ.ಮೀ, ಜ್ಞಾನಭಾರತಿ- 11 ಮಿ.ಮೀ, ನಂದಿನಿ ಲೇಔಟ್-11 ಮಿ.ಮೀ, ಹಂಪಿನಗರ- 10 ಮಿ.ಮೀ, ನಾಗರಭಾವಿ- 11 ಮಿ.ಮೀ, ಚಾಮರಾಜಪೇಟೆ 12 ಮಿ.ಮೀ, ಕೆ.ಜೆ.ಹಳ್ಳಿ- 13 ಮಿ.ಮೀ, ಕುಮಾರಸ್ವಾಮಿ ಲೇಔಟ್-10.5 ಮಿ.ಮೀ ಮಳೆಯಾಗಿದೆ.
ಪಾಲಿಕೆ ಆಡಳಿತಾಧಿಕಾರಿಗೆ ಸಿಎಂ ಕರೆ...
ನಗರದಲ್ಲಿ ಮಳೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಗೆ ಫೋನ್ ಕರೆ ಮಾಡಿ ಮುನ್ನಚ್ಚರಿಕೆ ಕೈಗೊಳ್ಳುವಂತೆ, ರಾಜಕಾಲುವೆ ತಗ್ಗು ಪ್ರದೇಶಗಳಲ್ಲಿ ಗಮನ ಹರಿಸುವಂತೆ ಹಾಗೂ ಯಾವುದೇ ಕ್ಷಣದಲ್ಲಿ ಎಲ್ಲ ಅಧಿಕಾರಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.







