ಬಿಜೆಪಿಯಿಂದ ಮೀಸಲಾತಿ ದುರುಪಯೋಗ: ಬಿಬಿಎಂಪಿ ಮಾಜಿ ಸದಸ್ಯ ಅಝ್ಮಲ್ ಬೇಗ್
ಬೆಂಗಳೂರು, ಸೆ.21: ಬಿಬಿಎಂಪಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ತಂತ್ರ ರೂಪಿಸಲಾಗಿದೆ. ಇದಕ್ಕಾಗಿ ಮೀಸಲಾತಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಅಝ್ಮಲ್ ಬೇಗ್ ಅಸಮಾಧಾನ ಹೊರಹಾಕಿದರು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ವಾರ್ಡ್‍ವಾರು ಮೀಸಲಾತಿ ಕರಡು ಪಟ್ಟಿಯಲ್ಲಿ ವಾರ್ಡ್ ಸಂಖ್ಯೆ 134ರ ಬಗ್ಗೆ ಆಕ್ಷೇಪಣೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇತ್ತೀಚಿನ ಸಮೀಕ್ಷೆಗಳ ಅನ್ವಯ ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 47 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಪ್ರಧಾನವಾಗಿ ಮುಸ್ಲಿಮರು 26 ಸಾವಿರ ಮಂದಿ ಇದ್ದಾರೆ. ಉಳಿದಂತೆ ಅನ್ಯ ಜನಾಂಗದ 23 ಸಾವಿರ ಜನರಿದ್ದಾರೆ. ಆದರೆ, ಬೆರಳೆಣಿಕೆಯಷ್ಟು ಮಾತ್ರ ಎಸ್ಸಿ ಸಮುದಾಯದ ಜನರಿದ್ದು, ಉದ್ದೇಶಪೂರ್ವಕವಾಗಿಯೇ ಈ ಕ್ಷೇತ್ರವನ್ನು ಮೀಸಲಾತಿಗೆ ಸೇರ್ಪಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದಲಿತ ಸಮುದಾಯ ರಾಜಕೀಯವಾಗಿ ಪ್ರಗತಿ ಸಾಧಿಸಬೇಕು ಎನ್ನುವುದು ನಮ್ಮೆಲ್ಲರ ಬಯಕೆ ಮತ್ತು ಆಶಯವಾಗಿದೆ. ಆದರೆ, ಈಗಿನ ಬಿಜೆಪಿ ಸರಕಾರ ಸಾಮಾನ್ಯ ವರ್ಗದ ವ್ಯಕ್ತಿಗೆ ಅನ್ಯಾಯ ಮಾಡಲು ಹೊರಟಿದೆ. ಅದರಲ್ಲೂ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ವಾರ್ಡ್‍ವಾರು ಮೀಸಲಾತಿ ಜಾರಿಗೆ ಕೈಹಾಕಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಾಪೂಜಿ ನಗರ ವಾರ್ಡ್ ಬಗೆಗಿನ ಮೀಸಲಾತಿ ಸಂಬಂಧ ನಾನು ಮಾತ್ರವಲ್ಲದೆ, ಇನ್ನಿತರೆ ಸಮುದಾಯದ ಪ್ರಮುಖ ಮುಖಂಡರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ ಎಂದ ಅವರು, ಬಿಬಿಎಂಪಿ ಮೀಸಲಾತಿ ಕರಡು ಪಟ್ಟಿ ಸಂಬಂಧ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅಝ್ಮಲ್ ಬೇಗ್ ಹೇಳಿದರು.
‘ನನ್ನನ್ನು ಗುರಿ ಮಾಡಿದ್ದಾರೆ'
ಈ ಹಿಂದಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಾಪೂಜಿನಗರ ವಾರ್ಡ್‍ನಲ್ಲಿಯೇ ಹೆಚ್ಚಿನ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗಿವೆ. ಇದನ್ನು ತಡೆಯುವ ಉದ್ದೇಶದಿಂದ ಈ ಮೀಸಲಾತಿ ಜಾರಿಗೆ ಮುಂದಾಗಿದ್ದಾರೆ.
-ಅಝ್ಮಲ್ ಬೇಗ್, ಬಿಬಿಎಂಪಿ ಮಾಜಿ ಸದಸ್ಯ







