ಜಗತ್ತಿನಾದ್ಯಂತ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 22: ಕೊರೋನ ವೈರಸ್ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚುತ್ತಿದ್ದು, ಕಳೆದ ವಾರಾಂತ್ಯದಲ್ಲಿ ಒಂದೇ ದಿನದಲ್ಲಿ 20 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಸಂಖ್ಯೆಗಳು ಹೇಳಿವೆ.
ಇದು ಹಿಂದಿನ ವಾರದ ಸಂಖ್ಯೆಗಿಂತ 6 ಶೇಕಡದಷ್ಟು ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸೋಮವಾರ ಬಿಡುಗಡೆ ಮಾಡಿದ ಹೊಸ ಅಂಕಿಸಂಖ್ಯೆಗಳು ತಿಳಿಸಿವೆ.
ಬ್ರಿಟನ್‌ನಲ್ಲಿ ಮತ್ತೆ ಕೊರೋನ ವೈರಸ್ ನಿರ್ಬಂಧ ಜಾರಿ
ಲಂಡನ್ : ಹೆಚ್ಚುತ್ತಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ, ಮನೆಯಿಂದಲೇ ಕೆಲಸ ಮಾಡುವಂತೆ ಮಂಗಳವಾರ ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ಜನರಿಗೆ ಸೂಚಿಸಿದ್ದಾರೆ ಹಾಗೂ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ.
ಸಂಸತ್ತು ಮತ್ತು ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಜಾನ್ಸನ್, ಜನರ ಸಾಮಾನ್ಯ ಬದುಕಿನ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದ್ದಾರೆ. ಆದರೆ, ಮಾರ್ಚ್‌ನಲ್ಲಿ ವಿಧಿಸಿರುವಂತೆ ಸಂಪೂರ್ಣ ರಾಷ್ಟ್ರೀಯ ನಿರ್ಬಂಧಗಳನ್ನು ವಿಧಿಸಿಲ್ಲ.
ಅಮೆರಿಕ : 2 ಲಕ್ಷ ದಾಟಿದ ಸಾವಿನ ಸಂಖ್ಯೆ
ಅವೆುರಿಕದ ಕೊರೋನ ವೈರಸ್ ಸಾವುಗಳ ಸಂಖ್ಯೆ ಸೋಮವಾರ 2 ಲಕ್ಷವನ್ನು ದಾಟಿದೆ. ದೇಶದ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ವಾರಗಳು ಇರುವಂತೆಯೇ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರೀ ಹಿನ್ನಡೆಯಾಗಿದೆ.
ಜಗತ್ತಿನಲ್ಲೇ ಅತಿ ಹೆಚ್ಚು ಕೊರೋನ ವೈರಸ್ ಸಾವುಗಳು ಅವೆುರಿಕದಲ್ಲಿ ಸಂಭವಿಸಿದೆ. ನಂತರದ ಸ್ಥಾನಗಳಲ್ಲಿ ಬ್ರೆಝಿಲ್ ಮತ್ತು ಭಾರತಗಳಿವೆ. ಬ್ರೆಝಿಲ್‌ನಲ್ಲಿ 1,36,895 ಸಾವುಗಳು ಸಂಭವಿಸಿದರೆ, ಭಾರತದಲ್ಲಿ 87,882 ಸಾವುಗಳು ವರದಿಯಾಗಿವೆ.