ದ್ವಿಚಕ್ರ ವಾಹನ, ಸರಗಳ್ಳತನ ಆರೋಪಿಗಳ ಬಂಧನ: 14 ಲಕ್ಷ ರೂ. ಮೌಲ್ಯದ ಸ್ವತ್ತು ವಶ

ಮೈಸೂರು,ಸೆ.26: ಸರಗಳ್ಳತನ ಮತ್ತು ಏಳು ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಕೃಷ್ಣರಾಜ ಠಾಣೆಯ ಪೊಲೀಸರು ಬಂಧಿಸಿದ್ದು, ಅವರಿಂದ 14,10,000 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗೀತ ಪ್ರಸನ್ನ ತಿಳಿಸಿದರು.
ಮೈಸೂರು ಕೃಷ್ಣರಾಜ ಠಾಣೆಯ ಎದುರು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಮಂಡಿ ಮೊಹಲ್ಲಾ ನಿವಾಸಿ ಮಹಮ್ಮದ್ ಫರಾಝ್ (28) ಬೇಮಗಳೂರಿನ ಕೆ.ಜಿ ಹಳ್ಳಿ ನಿವಾಸಿ ಅರ್ಬಾಝ್ ಖಾನ್ (24) ಬೆಂಗಳೂರಿನ ಕಾವಲ್ ಭೈರಸಂದ್ರದ ಜಿಬ್ರಾನ್ ಖಾನ್ (19), ಹುಣಸೂರು ಶಬೀರ್ ನಗರ ನಿವಾಸಿ ಇಮ್ರಾನ್ ಖಾನ್ (21) ಇವರನ್ನು ಬಂಧಿಸಲಾಗಿದೆ ಎಂದರು.
ಚಾಮುಂಡಿಬೆಟ್ಟದಲ್ಲಿ ಗಸ್ತಿನಲ್ಲಿದ್ದ ವೇಳೆ ಚಾಮುಂಡಿಬೆಟ್ಟದ ಮುಖ್ಯ ರಸ್ತೆ ಉತ್ತನಹಳ್ಳಿ ಕಡೆಗೆ ಹೋಗುವ ಜಂಕ್ಷನ್ ಬಳಿ ನಾಲ್ವರು ಬೈಕ್ ಮತ್ತು ಡಿಯೋ ಸ್ಕೂಟರ್ ನ್ನು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ನಿಂತಿದ್ದು ಪೊಲೀಸ್ ಜೀಪ್ ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು ಹಿಡಿದು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಕೆ.ಆರ್.ಪೊಲೀಸ್ ಠಾಣೆಯ 4 ಸರಗಳ್ಳತನ, ಮೈಸೂರು ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಒಂದು ಹಾಗೂ ಕುವೆಂಪು ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದಿದ್ದ ಒಂದು ಸರಗಳ್ಳತನ ಪತ್ತೆಯಾಗಿದೆ.
ಕೆ.ಆರ್ ಠಾಣೆಯ 4 ದ್ವಿಚಕ್ರ ವಾಹನ, ಉಪ್ಪಾರಪೇಟೆಯ ಒಂದು ದ್ವಿಚಕ್ರ ವಾಹನ, ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ದ್ವಿಚಕ್ರ ವಾಹನ, ಮಹಾಲಕ್ಷ್ಮಿ ಲೇ ಔಟ್ ಪೊಲೀಸ್ ಠಾಣೆಯ ಒಂದು ದ್ವಿಚಕ್ರ ವಾಹನ ಕಳುವು ಪ್ರಕರಣ ಪತ್ತೆಯಾಗಿದೆ ಎಂದರು. ಸುಮಾರು 14,10,000 ರೂ.ಮೌಲ್ಯದ ಒಟ್ಟು 7 ವಿವಿಧ ಮಾದರಿಯ ದ್ವಿಚಕ್ರ ವಾಹನಗಳು ಹಾಗೂ 6 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ಸಹಾಯಕ ಪೊಲೀಸ್ ಆಯುಕ್ತ ಪೂರ್ಣಚಂದ್ರತೇಜಸ್ವಿ ಮಾರ್ಗದರ್ಶನದಲ್ಲಿ ಕೆಆರ್ ಠಾಣೆಯ ಆರಕ್ಷಕ ನಿರೀಕ್ಷಕ ಎಲ್ ಶ್ರೀನಿವಾಸ್ ನೇತೃತ್ವದಲ್ಲಿ ಉಪನಿರೀಕ್ಷಕ ಸಿ.ಎನ್ ಸುನೀಲ್, ಠಾಣಾ ಸಿಬ್ಬಂದಿಗಳಾದ ಎಎಸ್ಐ ಡಿ.ಬಿ.ಸುರೇಶ್, ಮೊಖದ್ದರ್ ಶರೀಫ್, ಪಿ.ಗಂಗಾಧರ್, ಎಂ.ಶ್ರೀನಿವಾಸ್ ಪ್ರಸಾದ್, ಎಸ್.ಸತೀಶ್ ಕುಮಾರ್, ಅಭಿಷೇಕ್, ಬೆಂಜಮಿನ್, ಎಂ.ಮಧು, ಶರತ್ ಕುಮಾರ್, ಎನ್.ರಾಗಿಣಿ, ಲೋಲಾಕ್ಷಿ, ಮಂಜುನಾಥ್, ಗುರುದೇವ್ ಆರಾಧ್ಯ, ಕುಮಾರ್, ಶ್ಯಾಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದರು.







