ಕನಸನ್ನು ಗುರಿಯಾಗಿ ಪರಿವರ್ತಿಸಿ, ನಿಮಗೂ ಸಾಧಕರಾಗಬಹುದು : ಡಾ. ಸೈಯ್ಯದ್ ಅಮೀನ್ ಅಹ್ಮದ್

ಮಂಗಳೂರು : ಇನ್ಫೋಮೇಟ್ ಫೌಂಡೇಶನ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ವಿಂಗ್ ಮತ್ತು ಚೇಸಿಂಗ್ ಡ್ರೀಮ್ಸ್ ಜಂಟಿ ಆಶ್ರಯದಲ್ಲಿ ಸರಕಾರಿ ಉದ್ಯೋಗಾವಕಾಶಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ಎಂಬ ವಿಷಯದಲ್ಲಿ ಮಾಹಿತಿ ಶಿಬಿರ ಇತ್ತೀಚೆಗೆ ಕಕ್ಕಿಂಜೆ ನೂರುಲ್ ಇಸ್ಲಾಂ ಮದರಸಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಕ್ಕಿಂಜೆ ಜುಮಾ ಮಸೀದಿ ಖತೀಬ್ ಶಂಶುದ್ದೀನ್ ಅಶ್ರಫೀ ಉದ್ಘಾಟಿಸಿದರು. ಮಂಗಳೂರು ಪಿಎ ಕಾಲೇಜು ಮ್ಯಾನೇಜ್ಮೆಂಟ್ ಆ್ಯಂಡ್ ರೀಸರ್ಚ್ ಸೆಂಟರ್ ನಿರ್ದೇಶಕ ಡಾಕ್ಟರ್ ಸೈಯ್ಯದ್ ಅಮೀನ್ ಅಹ್ಮದ್ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಮಾಡುವ ಕನಸನ್ನು ಗುರಿಯಾಗಿ ಪರಿವರ್ತಿಸಿ ಆ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಮಾಡಿದರೆ ಖಂಡಿತವಾಗಿಯೂ ಮುಂದೊಂದು ದಿನ ತಾವೆಲ್ಲರೂ ಸಾಧಕರಾಗಿ ಮೂಡಿಬರುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು.
ಇನ್ಫೋಮೇಟ್ ಫೌಂಡೇಶನ್ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಪ್ರಾಸ್ತಾವಿಕ ಭಾಷಣಗೈದು ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರಲ್ಲದೆ ಸಾಚಾರ್ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ಮುಸ್ಲಿಮರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ವಿವರಿಸಿದರು.
ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯಾಧ್ಯಕ್ಷ ನಝೀರ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು. ಐ.ಕೆ. ಮೂಸಾ ದಾರಿಮಿ ಕಕ್ಕಿಂಜೆ ದುಆ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕ ಶ್ರೀ ಪವನ್ ಕುಮಾರ್ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಚೇಸಿಂಗ್ ಡ್ರೀಂ ಸಂಸ್ಥೆಯ ಮುಖ್ಯಸ್ಥ ಅಡ್ವೋಕೇಟ್ ನವಾಝ್ ಶರೀಫ್ ಸ್ವಾಗತಿಸಿದರು. ಅಬೂಬಕ್ಕರ್ ಉಜಿರೆ, ರಿಯಾಝ್ ಮೊಹಬ್ಬತ್ ಎಂಜೆಎಂ ಕಕ್ಕಿಂಜೆ ಮಸೀದಿ ಅಧ್ಯಕ್ಷ ಕೆ.ಎ ರಹಿಮಾನ್ ಉಪಸ್ಥಿತರಿದ್ದರು.








.jpeg)

.jpeg)



