ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಕೊರೋನ : ಆಸ್ಪತ್ರೆಗೆ ದಾಖಲು

ಉಡುಪಿ, ಅ.1: ಹಿರಿಯಡ್ಕ ಪೇಟೆಯಲ್ಲಿ ಸೆ.24ರಂದು ಹಾಡಹಗಲೇ ನಡೆದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ರುವ ಐವರು ಆರೋಪಿಗಳ ಪೈಕಿ ಇಬ್ಬರಿಗೆ ಕೊರೋನ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ನ್ಯಾಯಾಲಯದ ಆದೇಶದಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದಂತೆ ಪ್ರಮುಖ ಆರೋಪಿ ಮನೋಜ್ ಕೋಡಿಕೆರೆ, ಚಿತ್ತರಂಜನ್ ಪೂಜಾರಿ, ದೀಕ್ಷಿತ್ ಶೆಟ್ಟಿ ಯಾನೆ ದೇವಿ ಪ್ರಸಾದ್ ಎಂಬವರ ಪೊಲೀಸ್ ಕಸ್ಟಡಿ ಅವಧಿ ಸೆ.30ಕ್ಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು.
ಬಂಧನ ಸಂದರ್ಭದಲ್ಲಿ ಎಲ್ಲ ಆರೋಪಿಗಳನ್ನು ಕೊರೋನ ಪರೀಕ್ಷೆಗೆ ಒಳ ಪಡಿಸಲಾಗಿದ್ದು, ಅದರಲ್ಲಿ ಇಬ್ಬರ ವರದಿ ಪಾಸಿಟಿವ್ ಎಂಬುದಾಗಿ ಬಂದಿದೆ. ಅದರಂತೆ ಅವರನ್ನು ಸೆ.30ರಂದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಇನ್ನು ಕೆಲವರು ಭಾಗಿಯಾಗಿದ್ದು, ಬಂಧಿತರು ನೀಡಿದ ಮಾಹಿತಿಯಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







