ರೈತ-ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಬೆಂಗಳೂರು, ಅ.2: ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯ ಸದಸ್ಯರು ಶುಕ್ರವಾರ ಮೌರ್ಯ ಸರ್ಕಲ್‍ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯ ವಸ್ತು ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಹಾಗೂ ಕಾರ್ಮಿಕ ವಿರೋದಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಪ್ರತಿಗಾಮಿ ಪರಿಣಾಮ ಬೀರಲಿದೆ. ಕೃಷಿ ಉತ್ಪನ್ನಗಳು ಕುಂಠಿತಗೊಂಡು ಆಹಾರ ಸ್ವಾವಲಂಬನೆಗೆ ಹೊಡೆತ ಬೀಳಲಿದೆ. ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯ ವಸ್ತು ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಕೃಷಿಯಲ್ಲಿ ಲಾಭವಿಲ್ಲ ಎಂದು ಕೃಷಿ ಭೂಮಿ ಮಾರಿಕೊಳ್ಳುತ್ತಿರುವ ರೈತರಿಗೆ ಕಾನೂನಿನ ಅಡೆತಡೆಗಳನ್ನು ತೆಗೆದು ಹಾಕಿರುವುದರಿಂದ ಇನ್ನುಮುಂದೆ ದುಡ್ಡಿರುವ ಕಾರ್ಪೋರೇಟ್ ಕಂಪನಿಗಳು, ಮಲ್ಟಿ ನ್ಯಾಷನಲ್ ಕಂಪೆನಿಗಳು ಇವರ ಜಮೀನು ಕೊಳ್ಳಲು ಅನುವು ಮಾಡಿದಂತಾಗುತ್ತದೆ. ಇವರ ಆಮಿಷಕ್ಕೆ ಬಲಿಯಾಗುವ ರೈತರು ತಮ್ಮಲ್ಲಿ ಉಳಿದಿರುವ ತುಂಡು ಭೂಮಿಯನ್ನು ಮಾರಿಕೊಂಡು ನಿರ್ಗತಿಕರಾಗಲಿದ್ದಾರೆ ಎಂದು ಹೇಳಿದರು.
ರೈತ ಮುಖಂಡ ವೀರಸಂಗಯ್ಯ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಕೆಲವು ಸಂಘಟನೆಗಳು ನಮಗೆ ಸ್ವಾತಂತ್ರ್ಯ ಬೇಡವೆಂದು ಹೋರಾಟ ನಡೆಸುತ್ತಿದ್ದವು. ಈಗ ಅವರೇ ಸರಕಾರಗಳನ್ನು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಸರಕಾರಗಳಿಗೆ ದಲಿತರು, ಕಾರ್ಮಿಕರು, ಅಲ್ಪಸಂಖ್ಯಾತರು, ರೈತರು ಬೆಂಬಲ ನೀಡಬಾರದು ಎಂದರು.
ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯವಸ್ತು ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.







