“ನಮ್ಮ ಮೊಬೈಲ್ ಫೋನ್‍ಗಳನ್ನು ಕೊಂಡು ಹೋಗಿದ್ದಾರೆ, ಮನೆಯಿಂದ ಹೊರಗೆ ಬರಲು ಬಿಡುತ್ತಿಲ್ಲ”
ಹತ್ರಸ್ ಸಂತ್ರಸ್ತೆಯ ಕುಟುಂಬ ಸದಸ್ಯನ ಆರೋಪ

ಲಕ್ನೋ: ಹತ್ರಸ್ ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ತಮ್ಮ ಮೊಬೈಲ್ ಫೋನ್‍ಗಳನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗಿದೆ ಹಾಗೂ ಕೆಲವರ ಫೋನ್‍ಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಕುಟುಂಬದ ಸದಸ್ಯರೊಬ್ಬರು ಆರೋಪಿಸಿದ್ದಾರೆ.
ಮಾಧ್ಯಮದ ಜತೆ ಮಾತನಾಡದಂತೆಯೂ ನಿರ್ಬಂಧ ವಿಧಿಸಲಾಗಿದೆ ಎಂದು ಇಂದು ಬೆಳಿಗ್ಗೆ ಕುಟುಂಬದ ಸದಸ್ಯನಾಗಿರುವ ಅಪ್ರಾಪ್ತ ಬಾಲಕ ಕೆಲವು ಮಾಧ್ಯಮ ಮಂದಿಯ ಬಳಿ ಹೇಳಿಕೊಂಡಿದ್ದಾನೆ. ಗ್ರಾಮ ಪ್ರವೇಶ ಸ್ಥಳದಲ್ಲಿ ಕಾದಿರುವ ಮಾಧ್ಯಮ ಮಂದಿಯ ಹತ್ತಿರ ಈ ಬಾಲಕ ಗದ್ದೆಗಳನ್ನು ದಾಟಿ ಬಂದಿದ್ದ. “ನನ್ನ ಫೋನ್ ಅನ್ನು ಅವರು ಕೊಂಡು ಹೋಗಿದ್ದಾರೆ. ಮಾಧ್ಯಮದ ಜತೆ ಮಾತನಾಡುವಂತೆ ನನ್ನ ಕುಟುಂಬ ಇಲ್ಲಿಗೆ ನನ್ನನ್ನು ಕಳುಹಿಸಿದೆ. ಗದ್ದೆಗಳನ್ನು ಹಾದು ನಾನಿಲ್ಲಿಗೆ ಬಂದಿದ್ದೇನೆ. ಮನೆಯಿಂದ ಹೊರಗೆ ಬರಲು ಬಿಡುತ್ತಿಲ್ಲ, ನಮಗೆ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ,'' ಎಂದು ಆತ ಹೇಳುತ್ತಿದ್ದಂತೆಯೇ ಅಲ್ಲಿಗೆ ಒಬ್ಬ ಪೊಲೀಸ್ ಅಧಿಕಾರಿ ಆಗಮಿಸಿದ್ದನ್ನು ಕಂಡು ಆತ ಅಲ್ಲಿಂದ ತೆರಳಿದ್ದಾನೆ.
ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ಇಷ್ಟೊಂದು ನಿರ್ಬಂಧಗಳನ್ನು ಏಕೆ ವಿಧಿಸಲಾಗಿದೆ ಎಂದು ಆ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದಾಗ ಅವರ ಬಳಿ ಉತ್ತರವಿರಲಿಲ್ಲ.





