ವಸುಧೇಂದ್ರರ ‘ತೇಜೊ ತುಂಗಭದ್ರಾ’ಕ್ಕೆ ಚಡಗ ಕಾದಂಬರಿ ಪ್ರಶಸ್ತಿ- 2019

ಉಡುಪಿ, ಅ.2: ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾ ಗುವ ಹನ್ನೊಂದನೆಯ ವರ್ಷದ ಚಡಗ ಕಾದಂಬರಿ ಪ್ರಶಸ್ತಿಗೆ ಖ್ಯಾತ ಸಾಹಿತಿ ವಸುಧೇಂದ್ರ ಅವರ ‘ತೇಜೋ ತುಂಗಭದ್ರಾ’ ಕಾದಂಬರಿ ಆಯ್ಕೆಯಾಗಿದೆ.
ಹೃದ್ಯ ಕಥೆಗಾರಿಕೆ ಮತ್ತು ಆಹ್ಲಾದಕರ ಸುಲಲಿತ ಪ್ರಬಂಧಗಳಿಂದ ಕನ್ನಡ ಕಥನಗಾರಿಕೆಗೆ ಹೊಸ ಆಯಾಮವನ್ನು ಕೊಟ್ಟಿರುವ ವಸುಧೇಂದ್ರರ ಎರಡನೆಯ ಕಾದಂಬರಿ ’ತೇಜೋ ತುಂಗಭದ್ರಾ’. ಇತಿಹಾಸವೆನ್ನುವ ರಾಜಮಹಾರಾಜರ ಕಥೆಯ ನಡುನಿಂದ ಜನಸಾಮಾನ್ಯರ ಬದುಕಿನ ಕಂಪನಗಳನ್ನು ಪ್ರತ್ಯೇಕಿಸಿ ಕಥೆಕಟ್ಟುವ ಸಹಜ ಸೊಬಗನ್ನು ಗುರುತಿಸಿ ಪ್ರಶಸ್ತಿಗೆ ಈ ಕಾದಂಬರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಮೂವರು ತೀರ್ಪುಗಾರರ ಆಯ್ಕೆ ಸಮಿತಿ ತಿಳಿಸಿದೆ ಎಂದು ಸ್ಪರ್ಧೆಯ ಸಂಚಾಲಕ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ತಿಳಿಸಿದ್ದಾರೆ.
ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಹತ್ತು ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ಅಥವಾ ಕೊರೋನಾ ಪರಿಸ್ಥಿತಿ ಹತೋಟಿಗೆ ಬಂದ ನಂತರ ಆಯೋಜಿಸಲಾಗುವ ಸಾರ್ವಜನಿಕ ಸಮಾರಂಭದಲ್ಲಿ ನೀಡಲಾಗು ವುದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ.ಭಾಸ್ಕರ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





