ನವೀಕರಣಗೊಂಡ ಉಡುಪಿ ‘ರೇಡಿಯೋ ಟವರ್’ ಉದ್ಘಾಟನೆ

ಉಡುಪಿ, ಅ.2: ನಗರದ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1938ರಲ್ಲಿ ನಿರ್ಮಾಣಗೊಂಡು ಇದೀಗ ನವೀಕರಣ ಗೊಂಡ ‘ರೇಡಿಯೋ ಟವರ್’ನ್ನು ಉದ್ಘಾಟಿಸಿದ ಶಾಸಕ ಕೆ.ರಘುಪತಿ ಭಟ್ ಅವರು ರೇಡಿಯೊ ಪ್ರಸಾರಕ್ಕೆ ಗಾಂಧೀ ಜಯಂತಿಯಂದು ಚಾಲನೆ ನೀಡಿದರು.
ಒಂದು ಕಾಲದಲ್ಲಿ ನಗರದ ಹಿರಿಯರಿಗೆ ಜಗತ್ತಿನ ಆಗುಹೋಗುಗಳನ್ನು ತಿಳಿಸುತಿದ್ದ ಈ ಟವರ್ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಣೆ ಯನ್ನು ಸ್ಥಗಿತಗೊಳಿಸಿತ್ತು. ಕಳೆದ ವರ್ಷದ ಗಾಂಧೀ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಗಮನಿಸಿದ್ದ ಜಿಲ್ಲಾಧಿಕಾರಿ ಜಿ.ಜಗದೀಶ್ ರೇಡಿಯೊ ಟವರ್ ಕಟ್ಟಡವನ್ನು ದುರಸ್ತಿಗೊಳಿಸಿ ಸಾರ್ವಜನಿಕ ಬಳಕೆಗೆ ಅನುವು ಮಾಡಲು ಸೂಚಿಸಿದ್ದರು.
ಅದರಂತೆ ಪ್ರಸ್ತುತ ದುರಸ್ತಿಗೊಂಡಿರುವ ಈ ಟವರ್ ಮೂಲಕ, ಪಾರ್ಕ್‌ಗೆ ಆಗಮಿಸುವ ಸಾರ್ವಜನಿಕರು, ಟವರ್ ಕೆಳಗಿರುವ ಕರಿಕಲ್ಲು ಬಂಡೆಯ ಮೇಲೆ ಕುಳಿತು ಪ್ರತಿದಿನ ಸಂಜೆ 5:30 ರಿಂದ ರಾತ್ರಿ 8 ಗಂಟೆಯವರೆಗೆ ರೇಡಿಯೋ ಕಾರ್ಯ ಕ್ರಮಗಳನ್ನು ಆಲಿಸಬಹುದಾಗಿದೆ.
ಟವರ್‌ನ ಹಿಂದಿನ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡದೆ, ಹೊಸ ಮೈಕ್‌ಗಳು ಮತ್ತು ರೇಡಿಯೋವನ್ನು ಅಳವಡಿಸಿದ್ದು, ಕೇಳುಗರಿಗೆ ಹೊಸ ಅನುಭವ ನೀಡಲಿದೆ. ಹೆಚ್ಚು ಕರ್ಕಶವಿಲ್ಲದೇ ಪಾರ್ಕ್ ನೊಳಗಿನ ಕೇಳುಗರಿಗೆ ಮಾತ್ರ ರೇಡಿಯೊ ಧ್ವನಿ ಮಾರ್ಧನಿಸಲಿದೆ. ಅಲ್ಲದೇ ಈ ಹಿಂದಿನಂತೆ ಪ್ರತಿದಿನ ಬೆಳಗ್ಗೆ 8, ಅಪರಾಹ್ನ 12:30 ಮತ್ತು ರಾತ್ರಿ 8 ಗಂಟೆಗೆ ಒಮ್ಮೆ ಟವರ್ ಮೂಲಕ ಅಲಾರಂ ಮೊಳಗಲಿದೆ.







