ಬೈಂದೂರಿನಲ್ಲಿ ರೈತ ಕಾಯ್ದೆ ವಿರೋಧಿಸಿ ಸತ್ಯಾಗ್ರಹ

ಬೈಂದೂರು, ಅ.2: ದೇಶ ಆಳುತ್ತಿರುವ ಬಿಜೆಪಿ ನೇತೃತ್ವದ ಸರಕಾರ ಗಾಂಧಿ ಹೆಸರು ಮಾತ್ರ ಬಳಸಿ ಗಾಂಧಿ ಆಶಯಗಳಿಗೆ ತಿಲಾಂಜಲಿ ನೀಡುತ್ತಿರುವುದು ಇತ್ತೀಚಿನ ರೈತ ಕಾಯ್ದೆಯಿಂದ ಮತ್ತೆ ಸಾಬೀತಾಗಿದೆ. ಬಿಜೆಪಿ ತನ್ನ ರಾಜಕೀಯ ಆರ್ಥಿಕ ಬಲವರ್ಧನೆಗಾಗಿ ಕಂಪೆನಿಗಳಿಗೆ ರೈತರನ್ನು ಒಪ್ಪಿಸುವ ಹುನ್ನಾರ ಮಾಡುತ್ತಿದೆ. ಈ ಕಾಯ್ದೆಯಿಂದಾಗಿ ಸಾರ್ವತ್ರಿಕ ರೇಷನ್ ವ್ಯವಸ್ಥೆ, ಸಹಕಾರಿ ಚಳುವಳಿಗಳು ನಾಶವಾಗಿ ಆಹಾರ ಭದ್ರತೆಗೆ ಪೆಟ್ಟು ಬೀಳಲಿದೆ ಎಂದು ಸಿಪಿಐಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.
ಗಾಂಧಿ ಜಯಂತಿಯಂದು ಬೈಂದೂರು ತಹಶೀಲ್ದಾರ್ ಕಛೇರಿ ಎದುರು ರೈತ ಕಾಯ್ದೆ ವಿರೋಧಿಸಿ ಹಮ್ಮಿಕೊಳ್ಳಲಾದ ಸತ್ಯಾಗ್ರಹದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ ಮಾತನಾಡಿದರು. ಸತ್ಯಾಗ್ರಹದಲ್ಲಿ ಮುಖಂಡರಾದ ನಾಗರತ್ನ ನಾಡ, ಗಣೇಶ ತೊಂಡೆಮಕ್ಕಿ, ಶೀಲಾವತಿ, ಚಿಕ್ಕ ಮೊಗವೀರ, ಸುಶೀಲ ನಾಡ ಮೊದಲಾದವರು ಉಪಸ್ಥಿತರಿದ್ದರು. ಕಾಂಗ್ರೆಸ್ ಕಿಸಾನ್ ಘಟಕ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿತು.







