ಗಾಂಧೀಜಿ ಚಿಂತನೆಗಳ ಪುನರ್‌ಮನನದ ಅಗತ್ಯ: ಡಾ.ಮಹಾಬಲೇಶ್ವರ ರಾವ್

ಉಡುಪಿ, ಅ.2: ಗಾಂಧೀಜಿ ವಿಚಾರಧಾರೆಗಳು ಹೇರಿಕೆಯಾಗದೆ, ಅನೌ ಪಚಾರಿಕ ಪಠ್ಯವಾಗಬೇಕು. ಜಗತ್ತಿನ ಇತಿಹಾಸದಲ್ಲಿ ಎಲ್ಲರನ್ನು ಮೀರಿದ ವ್ಯಕ್ತಿತ್ವ ಹೊಂದಿರುವ ಗಾಂಧೀಜಿಯ ಚಿಂತನೆಗಳ ಪುನರ್‌ಮನನ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಉಡುಪಿ ಗಾಂಧಿ ಅಧ್ಯಯನ ಕೇಂದ್ರ, ಉಡುಪಿ ಎಂಜಿಎಂ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ನೂತನ ರವೀಂದ್ರ ಮಂಟಪದಲ್ಲಿ ಜರಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉನ್ಯಾಸ ನೀಡಿದರು.
ಜಗತ್ತಿನಲ್ಲಿ ಅತ್ಯಂತ ಚರ್ಚಿತ, ವಿವಾದಿತ ವ್ಯಕ್ತಿ ಗಾಂಧೀಜಿ. ಅವರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಗ್ರಂಥಗಳು ಪ್ರಕಟಗೊಳ್ಳುತ್ತಿವೆ. ಗಾಂಧೀಜಿ ಪ್ರತಿಪಾಧಿಸಿದ್ದ ಮತ್ತೊಂದು ಧರ್ಮ ಅಹಿಂಸೆ. ಇಂದು ನಮ್ಮ ಎಲ್ಲಾ ವ್ಯವಸ್ಥೆ ಯೊಳಗೆ ಹಿಂಸೆ ಎಂಬುದು ತಾಂಡವಾಡುತ್ತಿದೆ. ಸುಳ್ಳಿನ ಜೀವನದಲ್ಲಿ ಬದುಕುತ್ತಿದ್ದೇವೆ ಎಂದರು.
ಗಾಂಧೀಜಿ ಅವರ ಹತ್ಯೆ ಆಕಸ್ಮಿಕವಲ್ಲ, ರಾಜಕೀಯ ಪಿತೂರಿಯಾಗಿದೆ. ದಾಖಲೆಗಳ ಪ್ರಕಾರ ಅವರ ಹತ್ಯೆಗೆ 7 ಬಾರಿ ಪ್ರಯತ್ನ ನಡೆಸಲಾಗಿತ್ತು. ಕಾಯುವವನು-ಕೊಲ್ಲುವವನು ಶ್ರೀರಾಮನೊಬ್ಬನೆ ಎಂದ ಗಾಂಧೀಜಿಯ ಅಹಿಂಸವಾದವನ್ನು ಹಿಂಸಾತ್ಮಕ ಪ್ರವೃತ್ತಿ ಕೊಂದಿತ್ತು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ್ ಎಸ್.ನಾಯಕ್ ವಹಿಸಿದ್ದರು. ಪದವಿಪೂರ್ವ ಕಾಲೇಜು ಪ್ರಾಂಶು ಪಾಲೆ ಮಾಲತಿದೇವಿ ಉಪಸ್ಥಿತರಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಪ್ರ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರಶಾಂತ್ ಉದ್ಯಾವರ ವಂದಿಸಿದರು. ಸುಚಿತ್ ಕೊಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.







