ಒಣತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪನೆಗೆ ಒಪ್ಪಂದ
ಉಳ್ಳಾಲ ನಗರಸಭೆಯೊಂದಿಗೆ ಹಸಿರುದಳ, ಎಪಿಡಿ ಫೌಂಡೇಶನ್ ಒಡಂಬಡಿಕೆ

ಮಂಗಳೂರು, ಅ.2: ಹಸಿರುದಳ ಮತ್ತು ಎಪಿಡಿ ಪ್ರತಿಷ್ಠಾನ ವತಿಯಿಂದ ದ.ಕ. ಜಿಲ್ಲೆಯ ಮೊದಲ ಒಣತ್ಯಾಜ್ಯ ಸಂಗ್ರಹ ಕೇಂದ್ರವನ್ನು (ಡಿಡಬ್ಲೂಸಿಸಿ) ಸ್ಥಾಪಿಸಲು ಉಳ್ಳಾಲ ನಗರ ಸಭೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಡಿಡಬ್ಲೂಸಿಸಿ ಪರಿಕಲ್ಪನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾರ್ಯ ರೂಪಕ್ಕೆ ತರಲಾಗುತ್ತಿದೆ. ಉಳ್ಳಾಲ ನಗರ ದಿನಕ್ಕೆ 18 ಟನ್ ತ್ಯಾಜ್ಯವನ್ನು ಉತ್ಪಾದಿಸುತ್ತಿದೆೆ. ಅದರಲ್ಲಿ ಸುಮಾರು 4-5 ಟನ್ ಒಣ ತ್ಯಾಜ್ಯ ಇರಲಿದೆ. ಉಳ್ಳಾಲ ನಗರ ಸಭೆಯೊಂದಿಗೆ 10 ತಿಂಗಳ ಕಾಲ ಅಧ್ಯಯನ ಮಾಡಿದ ನಂತರ ಮತ್ತು ಉಳ್ಳಾಲದ ಪ್ರಸ್ತುತ ಘನತ್ಯಾಜ್ಯ ನಿರ್ವಹಣೆಯನ್ನು (ಎಸ್‌ಡಬ್ಲುಎಂ) ಅರ್ಥೈಸಿಕೊಂಡ ನಂತರ ಹಸಿರುದಳ/ ಎಪಿಡಿ ಪ್ರತಿಷ್ಠಾನ ಡಿಡಬ್ಲೂಸಿಸಿ ಯೋಜನೆಯನ್ನು ಸಿದ್ಧಪಡಿಸಿದೆ.
ಉಳ್ಳಾಲದಲ್ಲಿರುವ ತ್ಯಾಜ್ಯ ಸಂಗ್ರಹಿಸುವವರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಸಮೀಕ್ಷೆ ನಡೆಸಲಾಯಿತು. ತ್ಯಾಜ್ಯ ಸಂಗ್ರಹಕಾರರಿಗೆ ಗುರುತಿನ ಚೀಟಿ ನೀಡಲಾಯಿತು. ಈ ತ್ಯಾಜ್ಯ ಸಂಗ್ರಹಕಾರರು ಡಿಡಬ್ಲೂಸಿಸಿ ಕೇಂದ್ರವನ್ನು ನಿರ್ವಹಿಸಲಿದ್ದಾರೆ. ಸಂಗ್ರಹಿಸಿದ ಒಣ ತ್ಯಾಜ್ಯವನ್ನು ಮರುಬಳಕೆದಾರರಿಗೆ ಕಳುಹಿಸಲಾಗುತ್ತದೆ. ಮರುಬಳಕೆ ಮಾಡಬಹುದಾದ ತ್ಯಾಜ್ಯದ ಮಾರಾಟದಿಂದ ಬರುವ ಆದಾಯದಿಂದ ತ್ಯಾಜ್ಯ ಸಂಗ್ರಹಕಾರರು ಮತ್ತು ಆಯೋಜಕರು ತಮ್ಮ ಗಳಿಕೆ ಪಡೆಯುತ್ತಾರೆ. ಉತ್ಪತ್ತಿಯಾದ ಹೆಚ್ಚುವರಿಯನ್ನು ಡಿಡಬ್ಲೂಸಿಸಿ ಕೇಂದ್ರದ ವಿಸ್ತರಣೆಗಾಗಿ ಮರುಹೂಡಿಕೆ ಮಾಡಲಾಗುತ್ತದೆ.
ಉಳ್ಳಾಲ ನಗರಸಭೆ ಮರುಬಳಕೆ ಮಾಡಬಹುದಾದ ಒಣತ್ಯಾಜ್ಯ ಸಂಗ್ರಹಿಸಲು, ಸಂಸ್ಕರಿಸಲು ಭೌತಿಕ ಮೂಲಸೌಕರ್ಯ ಒದಗಿಸಲಿದೆ. ಹಸಿರುದಳ/ ಎಪಿಡಿ ಪ್ರತಿಷ್ಠಾನ ತಾಂತ್ರಿಕತೆಯನ್ನು ಒದಗಿಸುತ್ತದೆ. ಯೋಜನೆಯ ತರಬೇತಿ ಮತ್ತು ಮೇಲ್ವಿಚಾರಣೆ ಕೈಗೊಳ್ಳಲಿದೆ. ಮುಹಮ್ಮದ್ ನವಾಝುದ್ದೀನ್ ಮತ್ತು ಅವರ ಇಬ್ಬರು ತ್ಯಾಜ್ಯ ವಿಂಗಡಕರ ತಂಡವು ಡಿಡಬ್ಲೂಸಿಸಿ ಘಟಕದ ದಿನನಿತ್ಯದ ವ್ಯವಹಾರ ನಿರ್ವಹಿಸಲಿದೆ.
ಡಿಡಬ್ಲೂಸಿಸಿ ಘಟಕವು ಅ.2ರಿಂದ ಉಳ್ಳಾಲದಲ್ಲಿ ಕಾರ್ಯನಿರ್ವಹಿಸಲು ಪ್ರಾಂಭಿಸಲಿದೆ. ಒಪ್ಪಂದವು ಮೂರು ವರ್ಷಗಳ ಅವಧಿಗೆ ಅನ್ವಯಿಸ ಲಿದ್ದು, ನಂತರ ನವೀಕರಿಸಬಹುದಾಗಿದೆ ಎಂದು ಎಪಿಡಿ ಪ್ರತಿಷ್ಠಾನದ ಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್ ಹೇಳಿದರು.
ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ವಾಣಿಶ್ರೀ ಬಿ.ಆರ್ ಹಸಿರುದಳ/ ಎಪಿಡಿ ಪ್ರತಿಷ್ಠಾನವನ್ನು ಪ್ರತಿನಿಧಿಸಿದರು. ಉಳ್ಳಾಲ ನಗರಸಭೆಯ ಆಯುಕ್ತ ರಾಯಪ್ಪ ಈ ಒಪ್ಪಂದಕ್ಕೆ ಸಹಿ ಹಾಕಿದರು.







