ಡ್ರಗ್ಸ್ ಜಾಲದ ಆರೋಪಿ ವಿರೇನ್ ಖನ್ನಾಗೆ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ
ಬೆಂಗಳೂರು, ಅ.2: ಡ್ರಗ್ಸ್ ಜಾಲದ ಪ್ರಮುಖ ರೂವಾರಿ ಎನ್ನಲಾದ ವಿರೇನ್ ಖನ್ನಾ ಅವರನ್ನು ಮಂಪರು ಪರೀಕ್ಷೆ ನಡೆಸಲು ನಗರದ ಸಿಸಿಎಚ್ ನ್ಯಾಯಾಲಯ ಅನುಮತಿ ನೀಡಿದೆ.
ಖನ್ನಾಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಸಿಸಿಬಿ ಪೊಲೀಸರು ಮನವಿ ಮಾಡಿಕೊಂಡರು. ಮನವಿ ಪರಿಗಣಿಸಿದ ನ್ಯಾಯಪೀಠ, ಪರೀಕ್ಷೆಗೆ ಅನುಮತಿ ನೀಡಿತು.
ಸ್ಯಾಂಡಲ್‍ವುಡ್ ನಟಿಯರು ಸೇರಿ ಹಲವು ಪ್ರಮುಖರು ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆಯೇ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು, ಡ್ರಗ್ಸ್ ಜಾಲದ ಪ್ರಮುಖ ರೂವಾರಿ ಎನ್ನಲಾದ ವಿರೇನ್ ಖನ್ನಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಖನ್ನಾ ಅವರು ತಮ್ಮ ಮೊಬೈಲ್‍ನ ಪಾಸ್‍ವರ್ಡ್ ನೀಡಲು ಹಿಂದೇಟು ಹಾಕಿದ್ದರು. ಎಷ್ಟೇ ಒತ್ತಾಯಿಸಿ ಕೇಳಿದರೂ ಪಾಸ್‍ವರ್ಡ್ ಅನ್ನು ನೀಡಿರಲಿಲ್ಲ. ಇದರಿಂದಾಗಿ, ಸಿಸಿಬಿ ಪೊಲೀಸರು ಮಂಪರು ಪರೀಕ್ಷೆಗೆ ಒಳಪಡಿಸಲು ನಿರ್ಧಾರ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.
ನ್ಯಾಯಪೀಠವು ಅನುಮತಿ ನೀಡಿದ್ದರಿಂದ ಮಂಪರು ಪರೀಕ್ಷೆಗೆ ಒಳಪಡಿಸಲು ಖನ್ನಾ ಅವರನ್ನು ಹೈದ್ರಾಬಾದ್‍ಗೆ ಕರೆದೊಯ್ಯಲು ಎಲ್ಲ ಸಿದ್ಧತೆಗಳನ್ನು ಪೊಲೀಸರು ಮಾಡಿಕೊಳ್ಳುತ್ತಿದ್ದಾರೆ.







