ಮಂಗಳೂರು: ಶಕ್ತಿ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ

ಮಂಗಳೂರು, ಅ.2: ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 151ನೇ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಮುಖ್ಯಅತಿಥಿಯಾಗಿ ಭಾಗವಹಿಸಿದ ಸಂತ ಅಲೋಶೀಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಶಿಕಾರಿಪುರ ಕೃಷ್ಣಮೂರ್ತಿ ಮಾತನಾಡಿ, ಶಾಲೆಗಳು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸ್ವಾಭಿಮಾನ, ಧೈರ್ಯ, ಸಂಶೋಧನೆ, ನಾಯಕತ್ವದ ಮಹತ್ವವನ್ನು ಕಲಿಸಿಕೊಡಬೇಕು. ಈ ಮೂಲಕ ಶಿಕ್ಷಕರು ಸಮಾಜಕ್ಕೆ ಉತ್ತಮ ಯುವ ಶಕ್ತಿಯನ್ನು ನೀಡಲು ಸಾಧ್ಯವಿದೆ ಎಂದರು.
ಶಿಕ್ಷಣದಲ್ಲಿ ಗಾಂಧೀಜಿಯ ತತ್ವಗಳನ್ನು ಅಳವಡಿಸುವ ಮೂಲಕ ಭಾರತವನ್ನು ಶಕ್ತಿವಂತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯ. ಗಾಂಧೀಜಿ ಹಾಗೂ ಲಾಲ್‌ಬಹುದೂರ್ ಶಾಸ್ತ್ರೀಯವರ ಬದುಕು, ಪ್ರತಿಯೊಬ್ಬರ ಜೀವನಕ್ಕೆ ಸ್ಫೂರ್ತಿಯಾಗಬೇಕು. ಅವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸೋಣ. ದೇಶದ ಅಭಿವೃದ್ಧಿಗಾಗಿ ದುಡಿಯೋಣ ಎಂದು ಕರೆ ನೀಡಿದರು.
ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ.ಕೆ.ಸಿ. ನಾಯಕ್ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಚಿಂತನೆ, ತತ್ವಗಳನ್ನು ಬದುಕಿನಲ್ಲಿ ಅಳವಡಿಸುವಲ್ಲಿ ಪ್ರಯತ್ನಿಸುವುದಾಗಿ ಮತ್ತು ಅವರ ಚಿಂತನೆಗಳನ್ನು ಶಾಲೆಯ ಶಿಕ್ಷಣ ನೀತಿ ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಧೀರ್ ಎಂ. ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲ ವಿದ್ಯಾ ಕಾಮತ್ ಜಿ. ಉಪಸ್ಥಿತರಿದ್ದರು.
ಶಿಕ್ಷಕಿ ಭವ್ಯಾ ಅಮಿನ್ ಕಾರ್ಯಕ್ರಮದ ಮಹತ್ವ ವಿವರಿಸಿದರು. ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಸಂಗೀತಾ ಪೆರಿಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ವಂದಿಸಿದರು.
ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಗೂ ಆನ್‌ಲೈನ್ ವಿದ್ಯಾರ್ಥಿಗಳು ಭಾಗವಹಿಸಿದರು.








