ಚಿಕ್ಕಮಗಳೂರು: 9ನೇ ದಿನಕ್ಕೆ ಕಾಲಿಟ್ಟ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಅಸಹಕಾರ ಚಳವಳಿ
ಗಾಂಧಿ ಜಯಂತಿ ದಿನದಂದು ವೈದ್ಯರು, ಸಿಬ್ಬಂದಿಯಿಂದ ಧರಣಿ

ಚಿಕ್ಕಮಗಳೂರು, ಅ.2: ಆರೋಗ್ಯ ಇಲಾಖೆಯಲ್ಲಿ ಕೋವಿಡ್-19 ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಅಸಹಕಾರ ಚಳವಳಿ 9ನೇ ದಿನಕ್ಕೆ ಕಾಲಿಟ್ಟಿದ್ದು, ಗಾಂಧಿ ಜಯಂತಿ ದಿನದಂದು ಆರೋಗ್ಯ ಇಲಾಖೆ ನೂರಾರು ಹೊರಗುತ್ತಿಗೆ ಸಿಬ್ಬಂದಿ, ವೈದ್ಯರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಧರಣಿ ನಡೆಸಿ ಸರಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಕೋರೋನ ಸೋಂಕಿನ ವಿರುದ್ಧ ಪ್ರಾಣವನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಸರಕಾರ ಅತ್ಯಂತ ಕಡಿಮೆ ವೇತನ ನೀಡಿ ದುಡಿಸಿಕೊಳ್ಳುತ್ತಿದೆ. ಉದ್ಯೋಗ ಭದ್ರತೆಯೊಂದಿಗೆ ಯಾವುದೇ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಖಾಯಂ ನೌಕರರು ಹಾಗೂ ಗುತ್ತಿಗೆ ನೌಕರರ ನಡುವೆ ಭಾರೀ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ವೇತನ ಸೇರಿದಂತೆ ಉದ್ಯೋಗ ಭದ್ರತೆ, ವಿಮೆ ಸೌಲಭ್ಯ ಮತ್ತು ವೇತನ ನೀಡುವ ವಿಚಾರದಲ್ಲೂ ಮಲತಾಯಿ ಧೋರಣೆ ನೀತಿ ತೋರಲಾಗುತ್ತಿದೆ. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಕೆಲಸ ಸ್ಥಗಿತಗೊಳಿಸಿ ಹೋರಾಟ ಮುಂದುವರಿಸಲಾಗುವುದು ಎಂದು ಈ ವೇಳೆ ಧರಣಿ ನಿರತರು ಎಚ್ಚರಿಸಿದರು.
ಕೊರೋನ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೋನ ವಾರಿಯರ್ಸ್ ಗಳ ಪೈಕಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸರಕಾರ ವೇತನ ಸೇರಿದಂತೆ ವಿವಿಧ ಸೌಲಭ್ಯಗಳ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರಕಾರ ನೀಡಿದೆಯಾದರೂ ಇದುವರೆಗೂ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.
ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಪೈಕಿ, ವೈದ್ಯರು, ನರ್ಸ್‍ಗಳು, ಫಾರ್ಮಾಸಿಸ್ಟ್ ಗಳು, ಲ್ಯಾಬ್ ಟೆಕ್ನೀಷಿಯನ್ಸ್ ಮತ್ತಿತರ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗೆ ಖಾಯಂ ನೌಕರರಿಗೆ ನೀಡುತ್ತಿರುವ ವೇತನಕ್ಕಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ. ಸರಕಾರ ವೈದ್ಯಕೀಯೇತರ ಸಿಬ್ಬಂದಿಗೆ 18 ಸಾವಿರ ವೇತನ ನೀಡುತ್ತಿದೆ, ಆದರೆ ವೈದ್ಯಕೀಯ ಸಿಬ್ಬಂದಿಗೆ 9ರಿಂದ 14 ಸಾವಿರ ರೂ. ವೇತನ ನೀಡುತ್ತಿದೆ. ಸರಕಾರ ಹೊರಗುತ್ತಿಗೆ, ಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಂತಿಯುತವಾಗಿ ಅಸಹಕಾರ ಹೋರಾಟ ಮಾಡುತ್ತಿದ್ದರೂ ಸರಕಾರ ವೈದ್ಯಾಧಿಕಾರಿಗಳ ಮೂಲಕ ನೋಟಿಸ್ ನೀಡುತ್ತಾ ಕೆಲಸದಿಂದ ಕಿತ್ತು ಹಾಕುವ ಬೆದರಿಕೆಯನ್ನೂ ನೀಡುತ್ತಿದೆ ಎಂದು ನೌಕರರು ಅಳಲು ತೋಡಿಕೊಂಡರು.
ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸರಕಾರ ಸದ್ಯ ನೀಡುತ್ತಿರುವ ವೇತನದಿಂದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಈ ನೌಕರರ ವೇತನವನ್ನು ಹೆಚ್ಚಿಸುವುದರೊಂದಿಗೆ ನೌಕರರು ಮೃತಪಟ್ಟಲ್ಲಿ 50 ಲಕ್ಷ ರೂ. ಪರಿಹಾರಧನ ನೀಡುವ ಯೋಜನೆಯನ್ನು ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು. ಗುತ್ತಿಗೆ ನೌಕರರಿಗೆ ಭತ್ಯೆ, ರಜೆ, ಪದೋನ್ನತಿ, ವರ್ಗಾವಣೆ, ಸಮಾನ ಕೆಲಸಕ್ಕೆ ಸಮಾನ ವೇತನ, ಪರಿಷ್ಕೃತ ವೇತನ, ವೈದ್ಯಕೀಯ ಸೌಲಭ್ಯ, ಬ್ಯಾಂಕ್ ಸಾಲಸೌಲಭ್ಯ ಸೇರಿದಂತೆ ಹೊರ ಗುತ್ತಿಗೆ ಪದ್ಧತಿಯನ್ನೂ ಕೈಬಿಡಬೇಕೆಂದ ಅವರು, ನೌಕರರ ಮೃತಪಟ್ಟಲ್ಲಿ ಖಾಯಂ ನೌಕರರಿಗೆ ನೀಡುವಂತೆ ಸೌಲಭ್ಯವನ್ನೂ ನೀಡಬೇಕು. ಸರಕಾರ ಬೇಡಿಕೆ ಈಡೇರಿಸುವವರೆಗೂ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರದ ಸಂಘದ ಜಿಲ್ಲಾಧ್ಯಕ್ಷೆ ಜ್ಯೋತಿ, ಮುಖಂಡರಾದ ಅಂಜಲಿ, ಡಾ.ಮಹಂತೇಶ್, ಡಾ.ಭಾನುಮತಿ, ಡಾ.ಪ್ರಥಮ್, ನಿತ್ಯಾ, ಗಿರೀಶ್, ಡಾ.ಸುಭಾಷ್, ದೀಪು, ವೆಂಕಟೇಶ್, ಮಧು, ಸಂತೋಷ್, ರಘು, ಚೇತನ್, ಪ್ರಕಾಶ್, ಹೂವಣ್ಣ, ಮುಂಜುನಾಥ್ ಮತ್ತಿತರರು ಧರಣಿಯಲ್ಲಿ ಉಪಸ್ಥಿತರಿದ್ದರು.







