ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೊರೆ ಹೋಗಿರುವ ಶರತ್ ಮನವೊಲಿಸಲು ಪ್ರಯತ್ನ: ಸಚಿವ ಸೋಮಶೇಖರ್

ಮೈಸೂರು,ಅ.2: ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೊರೆ ಹೋಗಿರುವ ಶರತ್ ಬಿ. ಅವರ ಮನವೊಲಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದ ಅರಮನೆ ಆವರಣದಲ್ಲಿ ಶುಕ್ರವಾರ ದಸರಾ ಗಜಪಡೆಗಳಿಗೆ ಸ್ವಾಗತ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ಅವರನ್ನು ಆಡಳಿತಾತ್ಮಕ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿಯವರನ್ನು ನೇಮಕ ಮಾಡಿದ್ದಾರೆ. ಇದಕ್ಕೆ ನಾವೆಲ್ಲರೂ ಸಮ್ಮತಿ ಸೂಚಿಸಿದ್ದು, ಶರತ್ ಅವರು ವರ್ಗಾವಣೆ ಕುರಿತು ಸಿಎಟಿ ಮೊರೆ ಹೋಗಿದ್ದಾರೆ. ಅವರ ಮನವೊಲಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವರ್ಗಾವಣೆ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ, ಯಾರ ಒತ್ತಡಕ್ಕೂ ಶರತ್ ಅವರ ವರ್ಗಾವಣೆ ಮಾಡಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿತ್ತು ಎಂದು ಸ್ಪಷ್ಟಪಡಿಸಿದರು.
ಕೋವಿಡ್ ನಿಯಂತ್ರಣ ನಮ್ಮ ಮುಖ್ಯ ಉದ್ದೇಶ ಆಗಿದ್ದು, ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ. ಈಗಿನ ಜಿಲ್ಲಾಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಎಲ್ಲರೂ ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಳ್ಳುವಂತೆ ತಿಳಿಸಿದರು.
ದಸರಾ ಆಚರಣೆಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನನಗೆ ಇದು ಮೊದಲ ದಸರಾ ಆಗಿದ್ದು ತಾಯಿ ಶ್ರೀ ಚಾಮುಂಡೇಶ್ವರಿ ಆಶೀರ್ವಾದ ದಿಂದ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಿ ದಸರಾ ಯಶಸ್ವಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.







