ಫ್ರಾನ್ಸ್ ನಲ್ಲಿ ಮತ್ತೆ ಕೊರೋನ ಸುನಾಮಿ: ಒಂದೇ ದಿನದಲ್ಲಿ 13 ಸಾವಿರ ಮಂದಿಗೆ ಸೋಂಕು

ಪ್ಯಾರಿಸ್,ಅ.2: ಕೋವಿಡ್-19 ಪ್ರಕರಣಗಳ ಏರಿಕೆಯನ್ನು ಕಾಣುತ್ತಿರುವ ಯುರೋಪ್‌ನ ರಾಷ್ಟ್ರಗಳಲ್ಲೊಂದಾದ ಫ್ರಾನ್ಸ್‌ನಲ್ಲಿ ಗುರುವಾರ ಒಂದೇ ದಿನದಲ್ಲಿ 13 ಸಾವಿರ ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಯುರೋಪ್‌ನಲ್ಲಿ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವುದು ಒಂದು ‘ಎಚ್ಚರಿಕೆಯ ಕರೆಗಂಟೆ’ಯೆಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
ಕೊರೋನ ಸೋಂಕಿನ ಪ್ರಕರಣಗಳ ಏರಿಕೆಯಲ್ಲಿ ಹಠಾತ್ತನೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪ್ಯಾರಿಸ್ ಪ್ರಾಂತದಲ್ಲಿ ಗರಿಷ್ಠ ಕಟ್ಟೆಚ್ಚರವನ್ನು ಘೋಷಿಸುವ ಸಾಧ್ಯತೆಯಿದೆಯೆಂದು ಫ್ರಾನ್ಸ್‌ನ ಆರೋಗ್ಯ ಸಚಿವ ಒಲಿವರ್ ವೇರಾನ್ ತಿಳಿಸಿದ್ದಾರೆ.
‘‘ಕೊರೋನ ಸೋಂಕಿನ ಪ್ರವೃತ್ತಿಯಲ್ಲಿ ಏರಿಕೆಯಾಗುತ್ತಿರುವುದನ್ನು ದೃಢಪಡಿಸಲು ಇನ್ನು ಕೆಲವು ದಿನಗಳು ಬೇಕಾಗುತ್ತದೆ. ಒಂದು ವೇಳೆ ಅದು ದೃಢಪಟ್ಟಲ್ಲಿ ಪ್ಯಾರಿಸ್ ಪ್ರಾಂತದಲ್ಲಿ ಸೋಮವಾರದಿಂದ ಗರಿಷ್ಠ ಕಟ್ಟೆಚ್ಚರವನ್ನು ಘೋಷಿಸದೆ ಬೇರೆ ದಾರಿಯೇ ಇಲ್ಲ’’ ಎಂದವರು ಹೇಳಿದ್ದಾರೆ.
ಪ್ಯಾರಿಸ್‌ನ ಆಸ್ಪತ್ರೆಗಳ ಶೇ.30ರಷ್ಟು ಹಾಸಿಗೆಳು ಕೋವಿಡ್-19 ರೋಗಿಗಳಿಂದ ಭರ್ತಿಯಾಗಿರುವುದಾಗಿ ಅವರು ಹೇಳಿದ್ದಾರೆ.





