ರಾಹುಲ್ ಗಾಂಧಿ ಹತ್ರಸ್ ಭೇಟಿಯ ಪ್ರಯತ್ನಕ್ಕೆ ಸ್ಮೃತಿ ಇರಾನಿ ಪ್ರತಿಕ್ರಿಯೆ ಏನು ಗೊತ್ತಾ?

ಹೊಸದಿಲ್ಲಿ, ಅ.3: ಉತ್ತರಪ್ರದೇಶದ ಹತ್ರಸ್‌ಗೆ ಭೇಟಿ ನೀಡಲು ಇಂದು ಎರಡನೇ ಬಾರಿ ಪ್ರಯತ್ನ ನಡೆಸಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಕೇಂದ್ರ ಸಚಿವೆ ಸ್ಮತಿ ಇರಾನಿ ವಾಗ್ದಾಳಿ ನಡೆಸಿದರು.
"ಕಾಂಗ್ರೆಸ್‌ಗೆ ತಂತ್ರಗಾರಿಕೆ ಏನೆಂದು ಜನರಿಗೆ ಗೊತ್ತಿದೆ...ಹೀಗಾಗಿ ಅವರು 2019ರ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾನು ನಾಯಕನನ್ನು ತಡೆಯಲು ಸಾಧ್ಯವಿಲ್ಲ. ಆದರೆ ಹತ್ರಸ್‌ಗೆ ಭೇಟಿ ನೀಡುತ್ತಿರುವುದು ಅವರ ರಾಜಕೀಯಕ್ಕಾಗಿಯೇ ಹೊರತು, ಬಲಿಪಶುವಾದ ಯುವತಿಯ ನ್ಯಾಯಕ್ಕಾಗಿ ಅಲ್ಲ ಎನ್ನುವುದು ಜನರು ಅರ್ಥ ಮಾಡಿಕೊಳ್ಳುತ್ತಾರೆ'' ಎಂದು ಇರಾನಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಇರಾನಿ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಕೆಲವು ಕಾಂಗ್ರೆಸ್ ಕಾರ್ಯಕರ್ತರು ವಾರಾಣಸಿಯಲ್ಲಿ ಇರಾನಿಯವರ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದು, 'ಸ್ಮತಿ ಇರಾನಿ ಹಿಂತಿರುಗಿ' ಹಾಗೂ 'ನಾವು ನ್ಯಾಯವನ್ನು ಹುಡುಕುತ್ತಿದ್ದೇವೆ' ಎಂದು ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್‌ನ ಹಲವಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇದಕ್ಕೂ ಮೊದಲುಹಿಂದಿಯಲ್ಲಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ದುಃಖದಲ್ಲಿರುವ ಈ ಕುಟುಂಬವನ್ನು ಭೇಟಿಯಾಗುವುದನ್ನು ಹಾಗೂ ಅವರ ನೋವನ್ನು ಹಂಚಿಕೊಳ್ಳುವುದನ್ನು ತಡೆಯುವ ಶಕ್ತಿ ಈ ವಿಶ್ವದಲ್ಲಿ ಯಾರಿಗೂ ಇಲ್ಲ ಎಂದು ಟ್ವೀಟಿಸಿದರು.
ರಾಹುಲ್ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಸಂಜೆ ಹತ್ರಸ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ.







