ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯಕುಮಾರ್‌ಗೆ ಗೃಹ ಬಂಧನ

ಲಕ್ನೊ,ಅ.3: ಉತ್ತರಪ್ರದೇಶದ ಹತ್ರಸ್‌ನ ದಲಿತ ಯುವತಿ ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆಯಿಂದ ದಿಲ್ಲಿಯ ಆಸ್ಪತ್ರೆಯಲ್ಲಿ ಮಂಗಳವಾರ ಸಾವನ್ನಪ್ಪಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ ಹಮ್ಮಿಕೊಂಡಿರುವುದಕ್ಕಾಗಿ ತನ್ನನ್ನು ಗೃಹ ಬಂಧನದಲ್ಲಿಡಲಾಗಿದೆ ಎಂದು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯಕುಮಾರ್ ಲಲ್ಲೂ ಹೇಳಿದ್ದಾರೆ.
"ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರವು ಅರಾಜಕತೆಯ ಎಲ್ಲ ಮಿತಿಯನ್ನು ಮೀರಿದೆ. ಕಳೆದ ರಾತ್ರಿ 1:30ಕ್ಕೆ ಪೊಲೀಸರು ನನ್ನ ಮನೆಗೆ ಬಂದಿದ್ದರು. ಅವರು ನನ್ನ ಮನೆಯ ಬಾಗಿಲನ್ನು ಒಡೆಯಲು ಯತ್ನಿಸಿದರು. ಬೆಳಗ್ಗೆ ಎದ್ದ ಬಳಿಕ ನೀವು ಏಕೆ ನನ್ನ ಮನೆಗೆ ಬಂದಿದ್ದೀರಿ ಎಂದು ಕೇಳಿದೆ. ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿ ಹೇಳಿದರು. ಅಕ್ಟೋಬರ್ 9ರಂದು ಹಝ್ರತ್‌ಗಂಜ್ ಸ್ಟೇಶನ್‌ನಲ್ಲಿ ಹಾಜರಾಗುವಂತೆ ನನಗೆ ತಿಳಿಸಲಾಗಿದೆ. ಅವರು ನನಗೆ ನೋಟಿಸ್ ನೀಡಿದ್ದಾರೆ. ಬೆಳಗ್ಗೆ 4ರ ಬಳಿಕ ನನಗೆ ಗೃಹ ಬಂಧನ ವಿಧಿಸಲಾಗಿದೆ ಎಂದು ತಿಳಿಸಿದರು. ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ತಪ್ಪೇ?ಎಂದು ಲಲ್ಲೂ ಪ್ರಶ್ನಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಘಟನೆಯ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿರುವ ಕಾರಣ ರಾಜ್ಯ ಸರಕಾರವು ನನ್ನ ಹಾಗೂ ನನ್ನ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದರು.





