ವರದಿಗಾರ್ತಿಯ ಫೋನ್ ಕದ್ದಾಲಿಕೆ: ಉತ್ತರಪ್ರದೇಶ ಸರಕಾರದ ವಿರುದ್ಧ ‘ಇಂಡಿಯಾ ಟುಡೇ’ ಆಕ್ರೋಶ

Photo: Twitter(@TanushreePande)
ಹೊಸದಿಲ್ಲಿ, ಅ.3: ಪತ್ರಕರ್ತೆ ತನುಶ್ರೀ ಪಾಂಡೆ ಹಾಗೂ ಹತ್ರಸ್ ಸಂತ್ರಸ್ತೆಯ ಸಹೋದರನ ನಡುವಿನ ಸಂಭಾಷಣೆಯು ಆನ್ಲೈನ್ನಲ್ಲಿ ಸೋರಿಕೆಯಾಗಿರುವುದಕ್ಕೆ ಬಿಜೆಪಿ ಆಡಳಿತದ ಉತ್ತರಪ್ರದೇಶ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸುದ್ದಿವಾಹಿನಿ ‘ಇಂಡಿಯಾ ಟುಡೇ’, ಪ್ರಕರಣದ ಕುರಿತು ವರದಿಗೆ ತೆರಳಿರುವ ಪತ್ರಕರ್ತೆ ಹಾಗೂ ಸಂತ್ರಸ್ತ ಯುವತಿಯ ಸಹೋದರನ ಫೋನ್ ಕದ್ದಾಲಿಸಿದ್ದೇಕೆ?. ಇದನ್ನು ತಮ್ಮ ಪರವಾದ ಸುದ್ದಿವಾಹಿನಿಯಲ್ಲಿ ಮಾತ್ರ ಬಿಡುಗಡೆ ಮಾಡಿದ್ದೇಕೆ? ಎಂದು ಪ್ರಶ್ನಿಸಿದೆ.
ಉತ್ತರಪ್ರದೇಶ ಸರಕಾರ ತಮ್ಮ ಕುಟುಂಬಕ್ಕೆ ಒತ್ತಡ ಹೇರುತ್ತಿದೆ ಎಂದು ಹೇಳುವಂತೆ ಸಂತ್ರಸ್ತೆಯ ಸಹೋದರನಿಗೆ ಪತ್ರಕರ್ತೆ ಪಾಂಡೆ ಕೋಚಿಂಗ್ ನೀಡಿದ್ದರು ಎಂದು ಬಲಪಂಥೀಯ ಪೋರ್ಟಲ್ ಆರೋಪಿಸಿತ್ತು. ನಿಮಗೆ ಒತ್ತಡವಿದೆಯೇ ಎಂದು ಸಂತ್ರಸ್ತ ಕುಟುಂಬವನ್ನು ಕೇಳಿದ್ದ ತನುಶ್ರೀ ಸಂತ್ರಸ್ತೆಯ ಸಹೋದರನ ಬಳಿ ತಂದೆಯ ವೀಡಿಯೊವನ್ನು ಕಳುಹಿಸಿಕೊಡುವಂತೆ ಹೇಳಿದ್ದರು ಎಂದು ಹಲವು ಪತ್ರಕರ್ತರು ಬೆಟ್ಟು ಮಾಡಿದ್ದಾರೆ.
ಉತ್ತರಪ್ರದೇಶದ ಹತ್ರಸ್ನ ದಲಿತ ಯುವತಿಯು ಅತ್ಯಾಚಾರ ಹಾಗು ಚಿತ್ರಹಿಂಸೆಯಿಂದ ದಿಲ್ಲಿಯಲ್ಲಿ ಮೃತಪಟ್ಟ ಬಳಿಕ ಉತ್ತರಪ್ರದೇಶ ಪೊಲೀಸರು ರಾತ್ರೋರಾತ್ರಿ ಅಂತ್ಯಕ್ರಿಯೆ ನಡೆಸಿರುವ ಆಘಾತಕಾರಿ ಸುದ್ದಿಯನ್ನು ತನುಶ್ರೀ ಪಾಂಡೆ ಅವರು ವರದಿ ಮಾಡಿದ್ದರು. ದೃಶ್ಯಗಳನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ತನುಶ್ರೀ ರಾತ್ರಿ ವೇಳೆ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸಿರುವುದು, ಕೊನೆಯ ಬಾರಿ ಮಗಳ ಮುಖವನ್ನು ನೋಡಲು, ಅಂತ್ಯಕ್ರಿಯೆಗೆ ಅವಕಾಶ ನೀಡುವಂತೆ ಕುಟುಂಬ ಸದಸ್ಯರು ಬೇಡಿಕೊಳ್ಳುತ್ತಿದ್ದ ದೃಶ್ಯವನ್ನು ಸೆರೆ ಹಿಡಿದಿದ್ದರು.
‘‘ಉತ್ತರಪ್ರದೇಶ ಸರಕಾರ ಪತ್ರಕರ್ತರಿಗೆ ಹತ್ರಸ್ಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಮಾಧ್ಯಮಗಳೊಂದಿಗೆ ಮಾತನಾಡಲು ಬಿಡುತ್ತಿಲ್ಲ. ಸಂತ್ರಸ್ತೆಯ ಸಹೋದರ ಸಂದೀಪ್ ಹಾಗೂ ಇಂಡಿಯಾ ಟುಡೇ ವರದಿಗಾರ್ತಿ ತನುಶ್ರೀ ಪಾಂಡೆ ನಡುವಿನ ಸಂಭಾಷಣೆಯ ಆಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡಲಾಗಿದೆ. ಹತ್ರಸ್ ಹತ್ಯೆಯ ಕುರಿತು ವರದಿ ಮಾಡಿದ್ದ ನಮ್ಮ ವರದಿಗಾರ್ತಿಯ ಟೆಲಿಫೋನ್ನ್ನು ಕದ್ದಾಲಿಸಿದ್ದೇಕೆ? ಸಂತ್ರಸ್ತ ಕುಟುಂಬದ ಫೋನ್ಗಳ ಕಣ್ಗಾವಲು ಅಥವಾ ಕದ್ದಾಲಿಕೆ ನಡೆಸಿದ್ದೇಕೆ? ಕಾನೂನಿನ ಯಾವ ನಿಬಂಧನೆಯ ಅಡಿಯಲ್ಲಿ ಫೋನ್ ಕದ್ದಾಲಿಸಲಾಗಿದೆ. ನಮ್ಮ ವರದಿಗಾರ್ತಿ ಸಂತ್ರಸ್ತೆಯ ಸಹೋದರನಲ್ಲಿ ಹಠ ಮಾಡಿ ತಂದೆಯ ವೀಡಿಯೊವನ್ನು ಕಳುಹಿಸುವಂತೆ ಹೇಳಿದ್ದರು. ಸರಕಾರದ ಬೆದರಿಕೆಯ ಬಗ್ಗೆ ಮಾತನಾಡುವಂತೆ ಹೇಳಿದ್ದರು. ದುರುದ್ದೇಶದಿಂದ ಆಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇಂಡಿಯಾ ಟುಡೇ ತನ್ನ ವರದಿಗಾರ್ತಿಯ ಬೆಂಬಲಕ್ಕೆ ನಿಲ್ಲಲಿದೆ. ಯುಪಿ ಸರಕಾರ ಮಾಧ್ಯಮಗಳಿಗೆ ಹತ್ರಸ್ ಪ್ರವೇಶಕ್ಕೆ ಹೇರಿರುವ ನಿರ್ಬಂಧವನ್ನು ಹಿಂಪಡೆಯಬೇಕು ಎಂದು ಇಂಡಿಯಾ ಟುಡೇ ಹೇಳಿಕೆಯೊಂದರಲ್ಲಿ ತಿಳಿಸಿದೆ.
BJP spokesperson @AmitMalviya questions India Today, we put forward the proof. Watch what Amit Malviya said when he was asked why the phone of a journalist was recorded. #Newstrack #HathrasHorror #UtttarPradesh @RahulKanwal pic.twitter.com/pNUkx8V5Uj
— IndiaToday (@IndiaToday) October 2, 2020







