ದೇವದತ್ತ್- ಕೊಹ್ಲಿ ಭರ್ಜರಿ ಬ್ಯಾಟಿಂಗ್: ರಾಜಸ್ಥಾನ್ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ

ಅಬುಧಾಬಿ: ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳನ್ನು ಗೆದ್ದ ಬೆಂಗಳೂರು ತಂಡವು ಅಗ್ರಸ್ಥಾನಕ್ಕೆ ಏರಿದೆ.
ಗೆಲುವಿಗೆ 155 ರನ್ ಗಳ ಗುರಿ ಪಡೆದ ಬೆಂಗಳೂರು ತಂಡವು 19.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಜಯಶಾಲಿಯಾಯಿತು. ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಮತ್ತೊಮ್ಮೆ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಅವರು 45 ಎಸೆತಗಳಲ್ಲಿ 63 ರನ್ ಸಿಡಿಸಿದರು. ನಾಯಕ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 72 ರನ್ ಬಾರಿಸಿದರು.
ರಾಜಸ್ಥಾನ್ ಪರ ಅರ್ಚರ್, ಗೋಪಾಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಜೋಸ್ ಬಟ್ಲರ್ 22, ಮಹಿಪಾಲ್ ಲಾಮ್ರೋರ್ 47, ರಾಹುಲ್ ತೆವಾಟಿಯ 24 ರನ್ ಗಳಿಸಿದರು.
ಬೆಂಗಳೂರು ಪರ ಯುಜುವೇಂದ್ರ ಚಾಹಲ್ 3, ಇಸುರು ಉದಾನ 2 ವಿಕೆಟ್ ಪಡೆದರು.





