ಕುಂದಾಪುರ: ದಲಿತ ಯುವತಿಯ ಅತ್ಯಾಚಾರ, ಕೊಲೆಗೆ ಪ್ರತಿಭಟನೆ

ಕುಂದಾಪುರ: ದಲಿತರು, ಮಹಿಳೆಯರು, ಬಡವರ ಮೇಲಾಗುವ ಕೊಲೆ, ಸುಲಿಗೆ, ಅತ್ಯಾಚಾರ, ಕ್ರೌರ್ಯ ನಡೆಸುವ ಉತ್ತರ ಪ್ರದೇಶದ ಬಿಜೆಪಿ ಆಡಳಿತವೇ ಸಂಘಪರಿವಾರಕ್ಕೆ ಮಾಡೆಲ್ ಆಗಿದೆ. ಆ ರಾಜ್ಯದಲ್ಲಿ ಓಬಿಸಿ ವರ್ಗದ ಮನುಷ್ಯರ ಬದುಕು ಪ್ರಾಣಿಗಳಿಗಿಂತ ನಿಕೃಷ್ಟವಾಗಿದ್ದು, ಅವರಿಗಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಉತ್ತರಪ್ರದೇಶದ ದಲಿತ ಯುವತಿಯ ಮೇಲಾದ ಅತ್ಯಾಚಾರ ಜಗತ್ತನ್ನೇ ದಿಗ್ಬ್ರಮೆಗೊಂಡಿದೆ. ಇದನ್ನು ಡಿವೈಎಫ್ಐ ತೀವ್ರವಾಗಿ ಖಂಡಿಸುತ್ತದೆ. ಈ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಡಿವೈಎಫ್ಐ ತಾಲೂಕು ಅಧ್ಯಕ್ಷ ರಾಜೇಶ್ ವಡೇರಹೋಬಳಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿ ನಾಲಿಗೆ ಕತ್ತರಿಸಿ ಕೊಲೆ ಮಾಡಿದ ಪ್ರಕರಣದ ವಿರುದ್ಧ ಡಿವೈಎಫ್‌ಐ, ದಲಿತ ಹಕ್ಕುಗಳ ಸಮಿತಿ, ಜನವಾದಿ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಇಂದು ಕುಂದಾಪುರದ ಗಾಂಧಿಪಾರ್ಕ್‌ಎದುರು ನಡೆದ ಪ್ರತಿಭಟೆಯಲ್ಲಿ ಅವರು ಮಾತನಾಡುತಿದ್ದರು.
ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಸುಶೀಲ ನಾಡ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆಯುವ ಜಾತಿ ಆಧಾರಿತ ಬರ್ಭರ ಅಪರಾಧಗಳನ್ನು ಬಿಜೆಪಿ ಸರಕಾರದ ಅಡಿಯಲ್ಲಿ ಸರಕಾರವೇ ಪೋಷಣೆ ಮಾಡುತ್ತಿದೆ. 2019 ರಲ್ಲಿಯೇ ಈ ರಾಜ್ಯದಲ್ಲಿ ನಡೆದ 59,853 ಇಂಥ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆ ಅಡಿಯಲ್ಲಿ ಹೆಣ್ಣುಮಕ್ಕಳ ವಿರುದ್ಧವೇ 7444 ಪ್ರಕರಣಗಳು ನಡೆದಿವೆ. ಆ ರಾಜ್ಯದಲ್ಲಿ ದಲಿತರು, ಮಹಿಳೆಯರ ಮೇಲೆ ಅತ್ಯಧಿಕ ದೌರ್ಜನ್ಯ ನಡೆಯುವ ಬಗ್ಗೆ ರಾಷ್ಟ್ರೀಯ ಕ್ರೈಮ್ ರೆಕಾರ್ಡ್ ಬ್ಯೂರೋ ವರದಿ ನೀಡಿದೆ. ಇಂತಹ ಸರಕಾರದಿಂದ ಇಡೀ ಮಾನವ ಕುಲವೇ ತಲೆತಗ್ಗಿಸುವಂತಾಗಿದೆ ಎಂದು ನಾಡಾ ಹೇಳಿದರು.
ಸಭೆಯಲ್ಲಿ ಸುರೇಶ್ ಕಲ್ಲಾಗರ, ಹೆಚ್ ನರಸಿಂಹ ಮಾತನಾಡಿದರು. ಡಿವೈಎಫ್ಐ ಕಾರ್ಯದರ್ಶಿ ಗಣೇಶದಾಸ ಸ್ವಾಗತಿಸಿದರು. ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಆರತಿ, ಕಾರ್ಯದರ್ಶಿ ಶೀಲಾವತಿ ಪಡುಕೋಣೆ, ದಲಿತಹಕ್ಕುಗಳ ಸಮಿತಿಯ ರವಿ ವಿಎಂ, ನಾಗರತ್ನ ನಾಡ, ಡಿವೈಎಫ್ಐ ಮುಖಂಡರಾದ ಕಿರಣ್ ನಾಡ, ರಾಜ ಬಿಟಿಆರ್, ಮಂಜುನಾಥ ಶೋಗನ್, ಉದಯ ಟೈಲರ್, ಸಮುದಾಯ ಸಂಘಟನೆಯ ಬಾಲಕೃಷ್ಣ ಕೆ ಎಂ, ವಿಕ್ರಮ್ ಮೊದಲಾದವರು ಭಾಗವಹಿಸಿದ್ದರು.









