ಕಾರ್ಮಿಕರ ಉದ್ಯೋಗ ಭದ್ರತೆಗೆ ಆಗ್ರಹಿಸಿ ಎಐಯುಟಿಯುಸಿ ಧರಣಿ
ಬೆಂಗಳೂರು, ಅ.3: ಎಐಯುಟಿಯುಸಿ ಸಂಯೋಜಿತ ಸ್ಕೀಮ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಅಖಿಲ ಭಾರತ ಪ್ರತಿಭಟನಾ ಸಪ್ತಾಹದ ಭಾಗವಾಗಿ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆಗೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಯೋಜನಾ ಕಾರ್ಮಿಕರನ್ನು ಸರಕಾರಿ ನೌಕರರೆಂದು ಪರಿಗಣಿಸುವವರಿಗೆ 21 ಸಾವಿರ ರೂ.ಮಾಸಿಕ ವೇತನ ನೀಡಬೇಕು. ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು. ಕೋವಿಡ್ ವಾರಿಯರ್ಸ್ ಗಳ ಸಾವಿಗೆ ಕೇಂದ್ರ ಸರಕಾರದಿಂದ 50 ಲಕ್ಷ ರೂ. ಆರೋಗ್ಯ ವಿಮೆಯನ್ನು ಖಾತ್ರಿಪಡಿಸಬೇಕು.
ಕೋವಿಡ್-19 ವಿರುದ್ದ ಹೋರಾಟ ಮಾಡುತ್ತಿರುವವರಿಗೆ ಸಮರ್ಪಕ ಪ್ರಮಾಣದಲ್ಲಿ ಪಿಪಿಇ ಕಿಟ್‍ಗಳನ್ನು ನೀಡಬೇಕು. ಎಲ್ಲ ಕಾರ್ಮಿಕರಿಗೆ 5 ಲಕ್ಷ ರೂ. ನಿವೃತ್ತಿ ಸೌಲಭ್ಯವನ್ನು ಖಚಿತಪಡಿಸಬೇಕು ಹಾಗೂ ಬಿಸಿಯೂಟ ಕಾರ್ಮಿಕರಿಗೆ ಈಗಿನ ಕಾನೂನು ಬಾಹಿರವಾದ 10 ತಿಂಗಳ ವೇತನದ ನೀತಿಯನ್ನು ಹಿಂಪಡೆದು, 12 ತಿಂಗಳ ಪೂರ್ತಿ ವೇತನವನ್ನು ಜಾರಿ ಮಾಡಬೇಕೆಂದು ಎಐಯುಟಿಯುಸಿ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.





